ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ, ಶಾಸಕ ಗವಿಯಪ್ಪಗೆ ಶೋಕಾಸ್ ನೋಟಿಸ್​: DK Shivakumar

DK Shivakumar (3)
Published on

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಈ ವಿಚಾರವಾಗಿ ಹೇಳಿಕೆ ನೀಡಿರುವ ಶಾಸಕ ಗವಿಯಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಗ್ಯಾರಂಟಿ ನಿಲ್ಲಿಸಿ ಅನುದಾನ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದೇವೆ ಎಂಬ ಶಾಸಕ ಗವಿಯಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಈ ರೀತಿ ಹೇಳಿದ್ದಾರೆ ಎಂದು ನಾನು ನಂಬುವುದಿಲ್ಲ. ಒಂದು ವೇಳೆ ಅವರು ಈ ಹೇಳಿಕೆ ಕೊಟ್ಟಿದ್ದೇ ಆಗಿದ್ದರೆ ವಿವರಣೆ ಕೇಳಿ ನೋಟೀಸ್ ನೀಡುತ್ತೇವೆ. ನಾವು ಗ್ಯಾರಂಟಿ ವಿಚಾರದಲ್ಲಿ ರಾಜ್ಯದ ಜನರಿಗೆ ಮಾತು ಕೊಟ್ಟಿದ್ದು, ಎಂತಹದೆ ಪರಿಸ್ಥಿತಿ ಬಂದರೂ ನಾವು ಅದಕ್ಕೆ ಬದ್ಧವಾಗಿದ್ದೇವೆ.

ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಅನರ್ಹರು ಇದರ ಲಾಭ ಪಡೆಯುತ್ತಿದ್ದರೆ, ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಈ ಯೋಜನೆಗಳಿಂದ ಪ್ರತಿ ಕ್ಷೇತ್ರಕ್ಕೆ 250 ಕೋಟಿಯಷ್ಟು ಹಣ ಹೋಗುತ್ತಿದೆ. ಇದು ಆ ಕ್ಷೇತ್ರದ ಜನರ ಅಭಿವೃದ್ಧಿಯಲ್ಲವೇ? ಅಭಿವೃದ್ಧಿ ಕಾರ್ಯಗಳಿಗೂ ನಾವು ಅನುದಾನ ನೀಡುತ್ತಿದ್ದೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ದೆಹಲಿಗೆ ಭೇಟಿ ನೀಡುತ್ತಿರುವುದು ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಹಾಗೂ ಆ ಭಾಗದ ಸಂಸದರನ್ನು ಭೇಟಿಯಾಗಲು. ಜತೆಗೆ ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು. ಇನ್ನು ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ನೂರು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದ ರೂಪುರೇಷೆ ವಿಚಾರವಾಗಿ ಚರ್ಚೆ ಮಾಡಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಬಹಳ ಸಂತೋಷ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಹದಾಯಿ ಯೋಜನೆಗೂ ಅನುಮತಿ ಕೊಡಿಸಲಿ, ಮಾನ್ಯ ದೇವೇಗೌಡರು ಮೇಕೆದಾಟು ಯೋಜನೆಗೂ ಅನುಮತಿ ಕೊಡಿಸುವುದಾಗಿ ಹೇಳಿದ್ದು, ಅದನ್ನೂ ಕೊಡಿಸಲಿ. ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲು ಸಹಕಾರ ಕೊಟ್ಟರೆ ನಾವು ಅದನ್ನು ಬಳಸಿಕೊಳ್ಳಲು ಸಿದ್ಧ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net