ತರಬೇತಿಗೆ ಬೇಕಿದೆ ಅನುದಾನದ ಗ್ಯಾರಂಟಿ

CTD 28 BABBURU FMTTI.jpg
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕೃಷಿ ಯಂತ್ರೋಪಕರಣ ಪರೀಕ್ಷೆ ಮತ್ತು ತರಬೇತಿ ಸಂಸ್ಥೆ (ಎಫ್‌ಎಂಟಿಟಿಐ) ಆರಂಭದ ನಂತರ ಹಿರಿಯೂರಿನ ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ಅನುದಾನ ಹಾಗೂ ಹಾಸ್ಟೆಲ್ ಸೌಕರ್ಯಕ್ಕೆ ಎದುರು ನೋಡುತ್ತಿದೆ.

ಕೇಂದ್ರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ಮತ್ತು ಕೃಷಿ ವಿವಿ ವ್ಯಾಪ್ತಿಯಲ್ಲಿ ಬಬ್ಬೂರು ಕಳೆದ ಜುಲೈನಿಂದಲೇ ಟೆಸ್ಟಿಂಗ್ ಕಾರ್ಯ ಆರಂಭಿಸಿದೆ. ಅನುದಾನ, ಹಾಸ್ಟೆಲ್‌ನಂಥ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಯಂತ್ರೋಪಕರಣಗಳ ನಿರ್ವಹಣೆ, ದುರಸ್ತಿ, ಬಳಕೆ ವಿಧಾನದ ತರಬೇತಿ ಪ್ರಾರಂಭವಾಗಿಲ್ಲ.

ಪ್ರಸ್ತುತ ರಾಜ್ಯದ ರಾಯಚೂರು, ಧಾರವಾಡ, ಬೆಂಗಳೂರು ಕೃಷಿ ವಿವಿಗಳು, ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಟೆಸ್ಟಿಂಗ್ ನಡೆಯುತ್ತಿದ್ದರೂ ಅಲ್ಲೆಲ್ಲ ತರಬೇತಿಗೆ ಅವಕಾಶವಿಲ್ಲವಂತೆ. ಆದರೆ ಬಬ್ಬೂರು ಟೆಸ್ಟಿಂಗ್ ಜತೆ ತರಬೇತಿಗೂ ಅವಕಾಶವಿರುವ ರಾಜ್ಯದ ಏಕೈಕ ಸಂಸ್ಥೆಯಾಗಿದೆ. ಮೂಲ ಸೌಕರ್ಯಗಳು ಸಿಕ್ಕಷ್ಟು ವೇಗವಾಗಿ ತರಬೇತಿಯನ್ನೂ ಇಲ್ಲಿ ಪ್ರಾರಂಭಿಸಬಹುದಾಗಿದೆ.

*ದೇಶದ 4 ಪ್ರಮುಖ ಕೇಂದ್ರಗಳು: ಆಸ್ಸಾಂನ ಬಿಸ್ವನಾಥ್, ಹರಿಯಾಣದ ಬುಡ್ನಿ ಮತ್ತು ಹಿಸ್ಸಾರ್ ಹಾಗೂ ಆಂಧ್ರಪ್ರದೇಶದ ಗಾರ್ಲದಿನ್ನಿ ಪರೀಕ್ಷಾ ಮತ್ತು ತರಬೇತಿ ಸಂಸ್ಥೆ ಗಳು ದೇಶದಲ್ಲಿರುವ ಪ್ರಮುಖ ಸಂಸ್ಥೆಗಳಾಗಿವೆ.

ವಿವಿಧ ರಾಜ್ಯಗಳಲ್ಲಿ ಉತ್ಪಾದಿಸುವ ಕೃಷಿ ಯಂತ್ರೋಪಕರಣಗಳ ಸಾಮರ್ಥ್ಯ, ಕ್ವಾಲಿಟಿ, ಇಂಧನ ಕ್ಷಮತೆಗಳ ಕುರಿತಂತೆ ಈ ಸಂಸ್ಥೆಗಳು ಅಥವಾ ಬಬ್ಬೂರನಂಥ ಸಬ್‌ಸೆಂಟರ್‌ಗಳಲ್ಲಿ ಪರೀಕ್ಷೆ ನಡೆಸಿ, ಮಾರಾಟಕ್ಕೆ ಪ್ರಮಾಣ ಪತ್ರಕೊಡಲಾಗುತ್ತದೆ. ಉತ್ಪಾದಕರು ಆನ್‌ಲೈನ್ ಮೂಲಕ ಟೆಸ್ಟಿಂಗ್‌ಗೆ ಅರ್ಜಿ ಹಾಕಿಕೊಳ್ಳಬೇಕಾಗುತ್ತದೆ.

ಬಬ್ಬೂರಲ್ಲಿ ಸಂಸ್ಥೆ ಸ್ಥಾಪನೆಯಿಂದಾಗಿ 10ಕ್ಕೂ ಹೆಚ್ಚು ಜಿಲ್ಲೆಗಳು, ಅನ್ಯರಾಜ್ಯಗಳ ತಯಾರಿಕರಿಗೆ ಅನುಕೂಲವಾಗಲಿದೆ. ಪೇಟೆಂಟ್ ಸು ರಕ್ಷತೆಯನ್ನು ಬಯಸುವಂಥವರಿಗೆ ಪ್ರತ್ಯೇಕವಾಗಿ ಟೆಸ್ಟಿಂಗ್ ಮಾಹಿತಿ ಕೊಡುವ ವ್ಯವಸ್ಥೆ ಕೂಡ ಇದೆ.

ಅ.6ರಂದು ಉದ್ಘಾಟನೆ: ಸಂಸ್ಥೆ ಉದ್ಘಾಟನೆಗೆ ಕಾಲ ಕೂಡ ಬಂದಿದೆ. ಬಬ್ಬೂರು ಕೆವಿಕೆ ಶತಮಾನೋತ್ಸವ ಸಮಾರಂಭದ ದಿನದಂದು ಅ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಹಿಂದೆಯೇ ಇಲ್ಲಿ ಸಂಸ್ಥೆ ಸ್ಥಾಪಿಸಬೇಕೆಂಬ ಕೇಂದ್ರದ ಉದ್ದೇಶಕ್ಕೆ ಕೋವಿಡ್ ತಡೆವೊಡ್ಡಿತ್ತು. ಕಳೆದ ವರ್ಷ ಜೂ.29ರಂದು ಬಬ್ಬೂರಿಗೆ ಭೇಟಿ ನೀಡಿದ್ದ ಗಾರ್ಲದಿನ್ನಿ ಎಸ್‌ಆರ್ ಎಫ್‌ಎಂಟಿಟಿಐ ಅಧಿಕಾರಿಗಳ ದ್ವಿ ಸದಸ್ಯರ ತಂಡ ಸಂಸ್ಥೆ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿತ್ತು. ಕೇಂದ್ರ ಕೃಷಿ ಸಚಿವಾಲಯ 1.17 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆ ಸ್ಥಾಪನೆಗೆ ಕಳೆದ ಜುಲೈ 22 ರಂದು ಆದೇಶಿಸಿತ್ತು. 25 ಎಕರೆ ವಿಸ್ತೀರ್ಣದಲ್ಲಿ ಲ್ಯಾಬ್ ಸಹಿತ ಸುಸಜ್ಜಿತ ಕಟ್ಟಡ ಈಗಾಗಲೇ ತಲೆ ಎತ್ತಿದೆ.

ಕೃಷಿ ಇಂಜಿನಿಯರಿಂಗ್ ಕಾಲೇಜು ಬೇಡಿಕೆ: ಇನ್ನೂರು ಎಕರೆ ವಿಸ್ತೀರ್ಣದ ಬಬ್ಬೂರಲ್ಲಿ ತೋಟಗಾರಿಕೆ ಕಾಲೇಜು, ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿದ್ದು, ಕೃಷಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಇಲ್ಲಿ ಕಾಲೇಜು ಸ್ಥಾಪನೆಯಾದರೆ ಹಿಂದುಳಿದ ಜಿಲ್ಲೆ ಚಿತ್ರದುರ್ಗ ಸಹಿತ ಅಕ್ಕಪಕ್ಕದ ಜಿಲ್ಲೆಗಳ ರೈತರ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂಬ ಕೂಗಿದೆ.

ಅರ್ಜಿಗಳು: ನಮ್ಮ ಸೆಂಟರ್‌ನಲ್ಲಿ ಬಿಐಎಸ್ ಮಾನದಂಡಗಳನ್ನಾಧರಿಸಿ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ನಮ್ಮಲ್ಲಿ 10 ಪರೀಕ್ಷೆಗಳಾಗಿದ್ದು, 13 ಲಕ್ಷ ರೂ.ಆದಾಯವೂ ದೊರಕಿದೆ. 33 ಅರ್ಜಿಗಳು ಸರತಿಯಲ್ಲಿವೆ. ಅನುದಾನದ ಕೊರತೆಯಿಂದ ತರಬೇತಿ ಪ್ರಾರಂಭವಾಗಿಲ್ಲ.-ಡಾ.ಶರಣಪ್ಪ ಜಂಗಂಡಿ, ಮುಖ್ಯಸ್ಥರು ಎಫ್‌ಎಂಟಿಟಿಐ, ಬಬ್ಬೂರು

ಸ್ವಾವಲಂಬನೆ: ನಮ್ಮ ಈ ಎಎಂಟಿಟಿಐಯಲ್ಲಿ ತರಬೇತಿ ಆರಂಭವಾದರೆ ರೈತರ ಮಕ್ಕಳಿಗೆ ಯಂತ್ರೋಪಕರಣ ದುರಸ್ತಿ, ನಿರ್ವಹಣೆ ಕೌಶಲ್ಯ ಕಲಿಸಲು ಅನುಕೂಲವಾಗಲಿದೆ. ಇದರಿಂದ ಅವರು ಸ್ವ ಉದ್ಯೋಗಿಗಳಾಗಿ, ಅವರ ಆರ್ಥಿಕ ಸ್ವಾವಲಂಬನೆಗೂ ನೆರವಾಗಲಿದೆ.-ಡಾ.ಎಸ್.ಓಂಕಾರಪ್ಪ, ಹಿರಿಯ ಕೃಷಿ ವಿಜ್ಞಾನಿ, ಕೆವಿಕೆ, ಬಬ್ಬೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net