ಕಾರ್ಪೊರೇಟ್ ಜಗತ್ತಿನ ಮುಂದೆ ಗ್ಯಾರಂಟಿ ಸಮರ್ಥನೆ, ಸರ್ಕಾರಿ ಶಾಲೆಗೆ ನೆರವು ಯಾಚನೆ!

SIDDARAMAIAH
Published on

ಬೆಂಗಳೂರು: ಗ್ಯಾರಂಟಿ ಭರವಸೆ ಈಡೇರಿಸಲು ಆದ್ಯತೆ ಕೊಟ್ಟಿರುವ ಸರ್ಕಾರ, ತನ್ನ ಉದ್ದೇಶವನ್ನು ಕಾರ್ಪೊರೇಟ್ ಕಂಪನಿಗಳ ಪ್ರಮುಖರ ಮುಂದೆ ಸಮರ್ಥಿಸಿಕೊಂಡಿದೆ. ಜತೆಗೆ ಸಿಎಸ್‌ಆರ್ ಹಣವನ್ನು ಕೇವಲ ಸರ್ಕಾರಿ ಶಾಲೆಯ ಅಭಿವೃದ್ಧಿ, ಕೌಶಲ್ಯ ನೀಡಲು ಬಳಸುವಂತೆ ಕೋರಿದೆ.

ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರದ ಅಪೇಕ್ಷೆಯಲ್ಲಿ ಪ್ರಸ್ತಾಪಿಸಿದರು.

ಮುಖ್ಯವಾಗಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಅನಿವಾರ್ಯತೆ, ಅದರ ಪರಿಣಾಮಗಳ ಕುರಿತು ವಿವರಿಸಿದರು.ಬಡವ ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಸಾರ್ವತ್ರಿಕ ಮೂಲ ಆದಾಯ ಎನ್ನುವ ತತ್ವದ ಅಡಿಯಲ್ಲಿ ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಗೌರವದ ಬದುಕು ಸಾಗೊಸಲು ಎಲ್ಲರ ಬಳಿ ಹಣ ಇರಬೇಕು. ಇದೇ ಕಾರಣಕ್ಕೆ ಐದು ಗ್ಯಾರಂಟಿ ಜಾರಿಗೆ ಕೊಡುತ್ತಿದ್ದೇವೆ ಎಂದರು.

ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರಿಗೂ ಅನ್ವಯ ಆಗುವ ರೀತಿಯಲ್ಲಿ ಐದು ಗ್ಯಾರಂಟಿಗಳನ್ನು ರೂಪಿಸಿದೆವು. ಇದರಿಂದಾಗಿ ಆರ್ಥಿಕತೆಗೆ ಹೊಸ ಚೈತನ್ಯ ಮತ್ತು ಶಕ್ತಿ ಬಂದಿದೆ. ನಾಡಿನ ಮಹಿಳೆಯರಿಗೆ ಆರ್ಥಿಕ ಸಫಲತೆ ಬಂದಿದೆ. ಹಸಿವಿನಿಂದ ಮಲಗುವವರು ಇಲ್ಲವಾಗಿದೆ. ಬಾಲ ಕಾರ್ಮಿಕ ಪದ್ಧತಿ ನಶಿಸಲು ನಮ್ಮ ಕಾರ್ಯಕ್ರಮ ಮತ್ತು ಗ್ಯಾರಂಟಿಗಳು ನೆರವಾಗುತ್ತಿವೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಇನ್ನೂ 75ರಷ್ಟು ಮಂದಿ ಮಾತ್ರ ಶಿಕ್ಷಿತರಿದ್ದಾರೆ. ಈ ಹಿಂದೆ ಕೆಲವರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು ಎಂದ ಅವರು ಶಿಕ್ಷಣ ಸಿಕ್ಕಾಗ ಮಾತ್ರ ಸಮಾನತೆ ಸಾಧ್ಯ.

ಸಮಾನತೆ ತರಲೇ ಬೇಕಾಗಿದೆ. ಇದೇ ಕಾರಣಕ್ಕೆ ಸಮಾವೇಶ ಮಾಡಲಾಗಿದೆ. ಈಗ ಶಿಕ್ಷಣಕ್ಕೆ ರಾಜ್ಯ ಸರ್ಕಾರ ನಲವತ್ತು ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೆ, ಸಂಬಳ, ಸಾರಿಗೆ, ಪಿಂಚಣಿಗೆ ಹೆಚ್ಚು ಖರ್ಚಾಗುತ್ತಿದೆ. ಇದರ ಜತೆ ಮೂಲಸೌಕರ್ಯ ಕೂಡ ಕಲ್ಪಿಸಬೇಕಿದೆ. ಹೀಗಾಗಿ ಲಾಭದ ಗಳಿಕೆಯ ಒಂದಂಶ ಸಿಎಸ್‌ಆರ್ ಅನ್ನು ಶಿಕ್ಷಣ, ಕೌಶಲ್ಯ ಅಭಿವೃದ್ಧಿಗೆ ಬಳಸಿದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲಾ ಸಹಕಾರ ಮತ್ತು ನೆರವನ್ನು ನೀಡುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಕೋರಿದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್ ಗೃಹ ಸಚಿವ ಜಿ.ಪರಮೇಶ್ವರ್, ಶರಣಪ್ರಕಾಶ್ ಪಾಟೀಲ್, ಡಿ.ಸುಧಾಕರ್ ಹಾಗೂ ಸಿಎಂ ಸಲಹೆಗಾರರಾದ ಗೋವಿಂದರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net