

ಬೆಂಗಳೂರು: ಗ್ಯಾರಂಟಿ ಯೋಜನೆ ಭವಿಷ್ಯದ ಬಗ್ಗೆ ಹಲವು ಸಚಿವರೇ ಅನುಮಾನಾಸ್ಪದ ಹೇಳಿಕೆ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೆಪಿಸಿಸಿಯು ಸಚಿವರಿಗೆ ಸೂಚನೆಯೊಂದನ್ನು ನೀಡಿದೆ.
ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಅನಾವಶ್ಯಕವಾಗಿ ಕೆಲವು ಸಚಿವರು ಮಾತನಾಡುತ್ತಿರುವುದು ಸರಿಯಲ್ಲ. ಅದೇನೇ ಇದ್ದರೂ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರ ಜತೆ ಚರ್ಚಿಸಿ ಹೇಳಿಕೆ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
4.40 ಕೋಟಿ ಜನರಿಗೆ ಈ ಐದೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ರಾಜ್ಯ ಸರ್ಕಾರ ಸಹ ಈ ಬಜೆಟ್‌ನಲ್ಲಿ 58,000 ಕೋಟಿ ರೂಪಾಯಿಯನ್ನು ಇದಕ್ಕೋಸ್ಕರ ತೆಗೆದಿರಿಸಿದೆ. ಹೀಗಿದ್ದರೂ ಕೆಲವರು ಅನಾವಶ್ಯಕವಾಗಿ ಮಾಧ್ಯಮಗಳಿಗೆ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದನ್ನು ಪಕ್ಷದ ಚೌಕಟ್ಟಿನಲ್ಲಿ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಇಂದಿನ ಸಚಿವರನ್ನು ಕೇಳಿ ಮಾಡಿಲ್ಲ. ಇವುಗಳನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ನಾಯಕರೆಲ್ಲ ಸೇರಿ ಘೋಷಣೆ ಮಾಡಿದ್ದರು. ಅಲ್ಲದೆ, ಗ್ಯಾರಂಟಿಗಳನ್ನು ಚುನಾವಣೆಯ ಮತ ಗಳಿಕೆಗಾಗಿ ಘೋಷಣೆ ಮಾಡಿದ್ದಲ್ಲ. ಶ್ರೀಸಾಮಾನ್ಯರನ್ನು ಮಹಿಳೆಯರನ್ನು ಆರ್ಥಿಕವಾಗಿ ಶಕ್ತಿಯುತರಾಗಿ ಸಬಲರನ್ನಾಗಿ ಮಾಡಬೇಕೆಂಬ ದೃಷ್ಟಿಯಿಂದ ಘೋಷಣೆ ಮಾಡಿ ಜಾರಿಗೆ ತಂದಿದೆ ಎಂದು ಅಪಸ್ವರ ತೆಗೆದ ಸಚಿವರಿಗೆ ನೆನಪಿಸಿದ್ದಾರೆ.