

ಬೆಂಗಳೂರು: ಐದು ಗ್ಯಾರೆಂಟಿ ಇರುವುದರಿಂದ ಶಾಸಕರನ್ನು ಮಲಗಿಸಿದಂತಾಗಿದೆ ಎಂಬ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ನಾನು ಮಾತನಾಡಿದ ಸಂದರ್ಭ ಬೇರೆ ಎಂದು ಶಾಸಕ ಷಡಕ್ಷರಿ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರೆಂಟಿಗಳಿಗೆ ಹೆಚ್ಚಿನ ಹಣ ಹೋಗಲಿದೆ ಹಾಗಾಗಿ ನಮಗೆ ಹೆಚ್ಚು ಸಿಗುತ್ತಿಲ್ಲ ಎಂದಿದ್ದೆ. ನಾನು ಎಲ್ಲೂ ಅಸಮಾಧಾನ ವ್ಯಕ್ತಡಿಸಿಲ್ಲ ಎಂದರು.
ಸಾರ್ವಜನಿಕರು ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗಾಗಿ ನಾನು ಅಲ್ಲಿ ಹೇಳಿದ್ದೆ. ಬಜೆಟ್ ಮುಗಿದಿದೆ ಮುಂದೆ ಅವರು ಹೆಚ್ಚು ಕೊಡುತ್ತಾರೆ ಎಂದು ಹೇಳಿದ್ದೆ. ಎಲ್ಲ ಶಾಸಕರಿಗೆ ಅನುದಾನ ಸಿಗುತ್ತಿದೆ. ನನಗಂತೂ ಹೆಚ್ಚಿನ ಅನುದಾನ ಸಿಗುತ್ತಿದೆ. ನಮ್ಮಲ್ಲಿ ರೆಬೆಲ್ ಇಲ್ಲ. ಸರ್ಕಾರದಲ್ಲಿ ಬೇಕಾದನ್ನು ಮಾಡಿ ಎಂದು ಹೇಳುತ್ತೇವೆ. ಅದನ್ನ ನೀವು ಬೇರೆ ರೀತಿ ಅರ್ಥೈಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
ತಿಪಟೂರಿಗೆ ಜಿಲ್ಲೆಯಾಗಲು ಎಲ್ಲ ಅರ್ಹತೆ ಇದೆ. ರಾಜಣ್ಣ ಅವರು ಮಧುಗಿರಿಗೆ ಕೇಳುತ್ತಿದ್ದಾರೆ. ಡಾ.ಪರಮೇಶ್ವರ್ ಅವರೂ ಕೇಳುತ್ತಿದ್ದಾರೆ. ಆದರೆ ನಾನು ಹೇಳುತ್ತಿರುವುದು ತಿಪಟೂರು ಸಮರ್ಥವಾಗಿದೆ. ಜಿಲ್ಲೆಯಾಗೋಕೆ ಬೇಕಾದ ಎಲ್ಲ ಅವಕಾಶ ಇದೆ. ಅದಕ್ಕೆ ತಿಪಟೂರು ಮಾಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಸಿಎಂ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಷಡಕ್ಷರಿ ಪ್ರತಿಕ್ರಿಯಿಸಿದರು.