

ಬೆಂಗಳೂರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಖಾಲಿ ಇರುವ 74 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 32 ವರ್ಷಕ್ಕೆ ನಿಗದಿ ಮಾಡಿರುವುದು ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ಸಾಮಾನ್ಯ ಹುದ್ದೆಗೆ 35 ವರ್ಷ, ಹಿಂದುಳಿದ ವರ್ಗಕ್ಕೆ 38 ಮತ್ತು ಪರಿಶಿಷ್ಟ ಜಾತಿ/ಪಂಗಡಗಳಿಗೆ 40 ವರ್ಷ ನಿಗದಿ ಮಾಡಿದೆ. ಆದರೆ, ಜಿಟಿಟಿಸಿ ಹುದ್ದೆಗಳ ಭರ್ತಿಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 27 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಪರಿಶಿಷ್ಟ ಜಾತಿ, ಪಂಗಡ/ಪ್ರವರ್ಗ-1, ಮಾಜಿ ಸೈನಿಕ ಮೀಸಲಾತಿ ಅಭ್ಯರ್ಥಿಗಳ ವಯೋಮಿತಿಯನ್ನು 32 ವರ್ಷಕ್ಕೆ ನಿಗದಿ ಮಾಡಿದೆ.
ಏ.19ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಲೆಕ್ಚರರ್, ಇಂಜಿನಿಯರ್, ಆಫೀಸರ್ ಗ್ರೇಡ್-2 ಸೇರಿ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆದರೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ ವಯೋಮಿತಿ ನಿಗದಿ ಮಾಡಿರುವುದು ಇತರೆ ಇಲಾಖೆಗಳ ಹುದ್ದೆಗಳಿಗೂ ಈ ಹುದ್ದೆಗೂ ಅರ್ಜಿ ಸಲ್ಲಿಸುವ ವಯೋಮಿತಿಯಲ್ಲಿ ಕನಿಷ್ಠ 8 ವರ್ಷಗಳ ವಯೋಮಿತಿ ವ್ಯತ್ಯಾಸವಾಗಲಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಲಿದೆ. ವಯೋಮಿತಿ ನಿಗದಿಪಡಿಸುವ ಸಂಬಂಧ ಸರ್ಕಾರವು ಇತರೆ ಇಲಾಖೆಯಂತೆಯೇ ಅವಕಾಶ ಮಾಡಿಕೊಡಬೇಕು ಎಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ.
ನಿಯಮ ತಿದ್ದುಪಡಿಗೆ ಪ್ರಯತ್ನ:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಡಿಯಲ್ಲಿ ಬರಲಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಖಾಲಿ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಯಮವನ್ನು ತಿದ್ದುಪಡಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಟಿಟಿಸಿ ಆಡಳಿತಾಧಿಕಾರಿ ಎಂ.ಎನ್. ಮಧುಸೂದನ್ ಸ್ಪಷ್ಟಪಡಿಸಿದರು.