

ತೆರಿಗೆ ಪದ್ಧತಿಯಲ್ಲಿ ಬಹುದೊಡ್ಡ ಸುಧಾರಣೆ ಎಂದು ಬಣ್ಣಿಸಲಾಗಿರುವ ಜಿಎಸ್ಟಿ ಜಾರಿಯಾಗಿ ಇಂದಿಗೆ ಮೂರು ವರ್ಷ. ಇದರ ಸಾಧನೆಗಳೇನು, ಆಗಬೇಕಾದ ಸುಧಾರಣೆಗಳೇನು ಎಂಬ ಬಗ್ಗೆ ವಿವರಿಸಿರುವ ತಜ್ಞರು, ಸಾಧಕ-ಬಾಧಕಗಳನ್ನು ತೆರೆದಿಟ್ಟಿದ್ದಾರೆ.
| ಸಿ.ಎಸ್.ಸುಧೀರ್
ರಾಜಕೀಯ ಬದಿಗಿಟ್ಟು ಬೆಳೆಯುತ್ತಿದೆ ಜಿಎಸ್ಟಿ: ಜಿಎಸ್ಟಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ‘ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್’ ಎಂದು ವಿಶ್ಲೇಷಣೆ ಮಾಡಿದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಜರಿದರು. ಇಬ್ಬರ ಹೇಳಿಕೆಗಳನ್ನೂ ರಾಜಕೀಯ ಪ್ರೇರಿತ ಎಂದಿಟ್ಟುಕೊಳ್ಳೋಣ. ಇದೆಲ್ಲ ಪಕ್ಕಕ್ಕಿಟ್ಟು ನೋಡಿದರೂ ಜಿಎಸ್ಟಿ, ತೆರಿಗೆ ವಿಚಾರದಲ್ಲಿ ಬಹಳ ದೊಡ್ಡ ಸುಧಾರಣೆ. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ನೀತಿ, ರಾಜ್ಯದ ಗಡಿಗಳಲ್ಲಿ ಚೆಕ್ಪೋಸ್ಟ್ ಕ್ಲಿಯರೆನ್ಸ್ಗಾಗಿ ಗಂಟೆಗಟ್ಟಲೆ ಕಾಯುವುದು, ಅವೈಜ್ಞಾನಿಕ ಮತ್ತು ದುಬಾರಿ ಪ್ರವೇಶ ತೆರಿಗೆಗಳು, 17 ಪರೋಕ್ಷ ತೆರಿಗೆಗಳು, ಅಸಮಂಜಸವಾದ ರಾಜ್ಯದ ನೀತಿ ನಿಯಮಗಳು, ಮೇಲ್ತೆರಿಗೆಗಳು, ಹತ್ತಾರು ಅಧಿಕಾರಿಗಳಿಂದ ಕಿರುಕುಳ, ಹೀಗೆ ಸಾಲು ಸಾಲು ಸಮಸ್ಯೆಗಳು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿದ್ದವು. ಸ್ವಾತಂತ್ರ್ಯ ನಂತರದ 70 ವರ್ಷಗಳ ಕಾಲ ತೆರಿಗೆ ವ್ಯವಸ್ಥೆ ಇದೇ ರೀತಿ ಭಯಾನಕವಾಗಿಯೇ ಇತ್ತು. ಜಿಎಸ್ಟಿ ಈ ಎಲ್ಲ ಸಮಸ್ಯೆಗಳಿಗೂ ಉತ್ತರ ರೂಪದಲ್ಲಿ ಜಾರಿಯಾಯಿತು. ರಾಜ್ಯಗಳ ಭಿನ್ನರಾಗದ ನಡುವೆಯೂ ದೇಶದ ಎಲ್ಲ ಕಡೆ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಜಾರಿಗೆ ಬಂತು.
ನೀತಿ ನಿರೂಪಣೆಯಲ್ಲಿ ಹೆಚ್ಚಿದ ವಿಶ್ವಾಸ: ನೀತಿ ನಿರೂಪಣೆ ವಿಚಾರದಲ್ಲಿ ಜಿಎಸ್ಟಿ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದೆ. ಮಾತುಕತೆ ಮತ್ತು ಸಹಮತದ ಆಧಾರದಲ್ಲಿ ಚರ್ಚೆ, ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದೆ. ರಾಜ್ಯ ಮತ್ತು ಕೇಂದ್ರದ ನಡುವೆ ಬರುವ ತೆರಿಗೆ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾದಂತಹ ವಾತಾವರಣ ನಿರ್ವಿುಸಿದೆ. ಪೂರ್ವಗ್ರಹ ಪೀಡಿತರಾಗದೆ, ವೈಯಕ್ತಿಕ ಅಜೆಂಡಾಗಳನ್ನು ಬದಿಗಿಡುವುದು, ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಪರಿಹಾರ ಕಂಡುಕೊಳ್ಳುವುದಕ್ಕೆ ಜಿಎಸ್ಟಿ ಮಂಡಳಿ ಆದ್ಯತೆ ನೀಡಿರುವುದಕ್ಕೆ ಹಲವು ನಿದರ್ಶನಗಳಿವೆ.
ಮೊದಲನೆಯದಾಗಿ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಸಂಪನ್ಮೂಲಗಳ ತುರ್ತು ಅಗತ್ಯತೆಯ ಹೊರತಾಗಿಯೂ ಎಲ್ಲ ಸಂಬಂಧಪಟ್ಟ ತೆರಿಗೆ ಇಲಾಖೆಗಳು ಮತ್ತು ಸಮಿತಿ ಮುಖ್ಯಸ್ಥರ ಜತೆ ಮಾತುಕತೆ ನಡೆಸದೆ, ಅಭಿಪ್ರಾಯ ಪಡೆಯದೆ ಕೇರಳ ಸರ್ಕಾರವು ಪ್ರವಾಹ ಸೆಸ್ ಜಾರಿಗೆ ತರಲಿಲ್ಲ. ಇದು ಈ ಹಿಂದಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಇಂತಹ ಸಮನ್ವಯವನ್ನು ಊಹಿಸಲು ಸಾಧ್ಯವಿರಲಿಲ್ಲ. ಪ್ರತಿ ರಾಜ್ಯ ಸರ್ಕಾರವೂ ತನ್ನದೇ ತೆರಿಗೆ ನೀತಿಯನ್ನು ಜಾರಿಗೆ ತಂದುಬಿಡುತ್ತಿತ್ತು.
ಜಿಎಸ್ಟಿ ಜಾರಿಯಾದ ತಕ್ಷಣ ಸಕ್ಕರೆಗೆ ಸೆಸ್ ತೆಗೆಯಲಾಯಿತು. ಆ ನಂತರದಲ್ಲಿ ಸಕ್ಕರೆಗೆ ಸೆಸ್ ವಿಧಿಸಬೇಕು ಎಂದು ಕಬ್ಬು ಬೆಳೆಗಾರರಿರುವ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಸರ್ಕಾರಗಳಿಂದ ಒತ್ತಡವಿತ್ತು. ಆದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಿಂದ ಸಕ್ಕರೆ ಸೆಸ್ಗೆ ವಿರೋಧವಿತ್ತು. ಈ ಪರ-ವಿರೋಧದ ಒತ್ತಡದ ನಡುವೆ ಜಿಎಸ್ಟಿ ಮಂಡಳಿ ಸಕ್ಕರೆಗೆ ಸೆಸ್ ವಿಧಿಸಿದರೆ ಜಿಎಸ್ಟಿ ನಿಯಮಗಳನ್ನು ಮುರಿದಂತೆ ಎನ್ನುವ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿತು. ಇದು ಜಿಎಸ್ಟಿ ಮಂಡಳಿ ಬಗೆಗಿನ ವಿಶ್ವಾಸ ಇಮ್ಮಡಿಗೊಳಿಸಿತು.
ಮತ್ತೊಂದು ಸಂದರ್ಭದಲ್ಲಿ ಲಾಟರಿಗಳಿಗೆ ತೆರಿಗೆ ವಿಧಿಸುವ ವಿಚಾರದಲ್ಲಿ ಈಶಾನ್ಯ ರಾಜ್ಯಗಳು ಮತ್ತು ಇತರೆ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿ ಮತದಾನದ ಮೂಲಕ ಜಿಎಸ್ಟಿ ಮಂಡಳಿ ವಿವಾದ ಇತ್ಯರ್ಥಪಡಿಸಿತು. ಈ ಮೇಲೆ ಹೇಳಿದ ಎಲ್ಲ ಸಾಧನೆಗಳು ಜಿಎಸ್ಟಿ ಬಗ್ಗೆ ಇರುವ ಅತಿಯಾದ ಟೀಕೆಗಳ ನಡುವೆ ಕಳೆದು ಹೋಗಿವೆ. ಜಿಎಸ್ಟಿಯಲ್ಲಿ ಖಂಡಿತವಾಗಿಯೂ ಲೋಪದೋಷ ಗಳಿವೆ. 7 ದಶಕಗಳಿಂದ ಇದ್ದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಉತ್ತರ ರೂಪದಲ್ಲಿ ಜಿಎಸ್ಟಿ ಬಂದಿದೆ. ಆದ್ದರಿಂದ ಅದು ಮತ್ತಷ್ಟು ಪಕ್ವಗೊಳ್ಳಲು ಸಮಯಬೇಕು.
(ಲೇಖಕರು ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ, ಸಿಇಒ)