ಇಂದಿನಿಂದ ಜಿಎಸ್​​ಟಿ 2.0 ಜಾರಿ: ಏನೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ; ಇಲ್ಲಿದೆ ನೋಡಿ ಮಾಹಿತಿ| GST

Untitled design (74)
Published on

GST: ದೇಶಾದ್ಯಂತ ಇಂದಿನಿಂದ (ಸೆ.22) ಜಿಎಸ್​ಟಿ  2.0 ಹೊಸ ತೆರಿಗೆ ನೀತಿ ಜಾರಿಗೆ ಬರಲಿದೆ. ಸೆಪ್ಟೆಂಬರ್ 3ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 56ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಹೊಸ ಬದಲಾವಣೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪ್ರಸ್ತುತ ಇರುವ 4 ಸ್ಲ್ಯಾಬ್ ತೆರಿಗೆಗಳನ್ನು ಬದಲಾವಣೆ ಮಾಡಲಾಗಿದ್ದು, ಕೇವಲ ಶೇ.5ರಷ್ಟು ಮತ್ತು ಶೇ. 18ರಷ್ಟು ಎರಡು ಸ್ಲ್ಯಾಬ್​ ತೆರಿಗೆ ಇರಲಿದೆ.

ಈ ಹಿನ್ನೆಲೆ ಎರಡು ಸ್ಲ್ಯಾಬ್ ಪ್ರಕಾರ ಸಾಮಾನ್ಯ ಜನರಿಗೆ ಅಗತ್ಯವಾದ ವಸ್ತುಗಳ ದರವು ಇಳಿಕೆಯಾಗಲಿದೆ. ನಿತ್ಯ ಬಳಸುವ ವಸ್ತುಗಳ, ಆಹಾರ ಉತ್ಪನ್ನಗಳು, ಆಟೋಮೊಬೈಲ್, ವಾಹನಗಳು ಸೇರಿ ಒಟ್ಟು 375 ವಸ್ತುಗಳ ಬೆಲೆ ಇಂದಿನಿಂದ ಕಡಿಮೆಯಾಗಲಿದೆ.

ಯಾವೆಲ್ಲಾ ವಸ್ತುಗಳ ಅಗ್ಗ

ಇಂದಿನಿಂದ ಔಷದಿಗಳ ಮೇಲಿನ ಜಿಎಸ್​ಟಿ ದರವನ್ನು ಶೇ. 12ರಿಂದ ಶೇ.5ಕ್ಕೆ ಇಳಿಸಲಾಗಿದೆ. ಇದರಿಂದ ಔಷದಿಗಳ ಬೆಲೆ ಇಳಿಕೆಯಾಗಲಿದೆ. ಹಾಗೆಯೇ ಕ್ಯಾನ್ಸರ್, ಜೆನೆಟಿಕ್, ಅಪರೂಪದ ಕಾಯಿಲೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದ ಒಟ್ಟು 36 ಔಷದಿಗಳ ಮೇಲೆ ಜಿಎಸ್​ಟಿ ಇರುವುದಿಲ್ಲ.

ಸಣ್ಣ ಕಾರುಗಳ ಮೇಲಿನ ಜಿಎಸ್​ಟಿಯನ್ನು ಶೇ. 18ಕ್ಕೆ ಇಳಿಸಲಾಗಿದೆ. ಹಲವಾರು ಆಟೋ ಮೊಬೈಲ್ ಕಂಪನಿಗಳು ಈಗಾಗಲೇ ತಮ್ಮ ದರವನ್ನು ಕಡಿತ ಮಾಡಲು ಘೋಷಿಸಿವೆ. ಜೊತೆಗೆ ದ್ವಿಚಕ್ರ ವಾಹನಗಳ ಜಿಎಸ್​ಟಿಯೂ ಶೇ.18ರಷ್ಟಿರುತ್ತದೆ.

ಕೂದಲಿನ ಎಣ್ಣೆ, ಸೋಪ್ ಬಾರ್​ಗಳು, ಶಾಂಪೂಗಳು, ಟೂತ್​ಬ್ರೆಸ್, ಪೇಸ್ಟ್​​ನಂತಹ ವಸ್ತುಗಳಿಗೆ ಶೇ. 5ರಷ್ಟು ಜಿಎಸ್​ಟಿ ಇರಲಿದೆ. ಜೊತೆಗೆ ಟಾಲ್ಕಮ್ ಪೌಡರ್, ಫೇಸ್ ಪೌಡರ್, ಶೇವಿಂಗ್ ಕ್ರೀಮ್, ಫೋಮ್​ನಂತಹ ವಸ್ತುಗಳ, ಆರೋಗ್ಯ ಕ್ಲಬ್​, ಸಲೂನ್​ಗಳು, ಸ್ಪಾ, ಪಿಟ್ನೆಸ್ ಸೆಂಟರ್​ಗಳು ಹಾಗೂ ಯೋಗ ಕೇಂದ್ರಗಳ ಸೇವೆಗಳ ಮೇಲಿನ ಜಿಎಸ್​ಟಿಯೂ ಶೇ.5ರಷ್ಟು ಇರುತ್ತದೆ.

ಟಿವಿ, ಎಸಿ, ಪಾತ್ರೆ ತೊಳೆಯುವ ಯಂತ್ರಗಳು, ಮನೆ ತೊಳೆಯುವ ಯಂತ್ರಗಳು ಸೇರಿ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. ಸಿಮೆಂಟ್ ಮೇಲಿನ ಜಿಎಸ್​ಟಿಯನ್ನೂ ಸಹ ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದ್ದು, ಸಿಮೆಂಟ್ ಬೆಲೆ ಇಳಿಕೆಯಾಗಲಿದೆ.

ದಿನ ಬಳಕೆಯ ಆಹಾರ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಪನ್ನೀರ್, ಕೆಚಪ್, ಉಪ್ಪು, ಜಾಮ್, ಡ್ರೈಪ್ರೂಟ್ಸ್, ಕಾಫಿ, ಐಸ್​ ಕ್ರೀಂಗಳ ಬೆಲೆಗಳು ಸಹ ಇಳಿಕೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net