ಜಿಎಸ್‌ಟಿ ಸರಳೀಕರಣದಿಂದ ರಾಜ್ಯಕ್ಕೆ 15,000 ಕೋಟಿ ರೂ. ಖೋತಾ

KBG
Published on

ಬೆಂಗಳೂರು: ಕೇಂದ್ರ ಸರ್ಕಾರದ ಜಿಎಸ್‌ಟಿ ದರ ಸರಳೀಕರಣ ಪ್ರಸ್ತಾವನೆಯಿಂದ ಕರ್ನಾಟಕಕ್ಕೆ ವಾರ್ಷಿಕ 15 ಸಾವಿರ ಕೋಟಿ ರೂ. ಆದಾಯ ಖೋತಾ ಆಗಲಿದೆ. ಈಗಾಗಲೇ ವಾರ್ಷಿಕ 70 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿದ್ದು, ಮತ್ತಷ್ಟು ಹೊರೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಜಿಎಸ್‌ಟಿ ದರ ಸರಳೀಕರಣ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಸ್ವಾಗತವಿದೆ. ಆದರೆ, ಇದರಿಂದ ಆಗುವ ನಷ್ಟವನ್ನು ತುಂಬಿಕೊಡಬೇಕೆಂಬುದು ಆಗ್ರಹವಾಗಿದೆ.

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾಗುವ ಮೊದಲು (2016-17) ರಾಜ್ಯದ ಆದಾಯದ ಪ್ರಗತಿ ವರ್ಷಕ್ಕೆ ಶೇ.14.4 (ಐದು ವರ್ಷಗಳ ಸರಾಸರಿ) ಆಗಿತ್ತು. ಜಿಎಸ್‌ಟಿ ಜಾರಿಯಿಂದ ಈ ಪ್ರಮಾಣ ಶೇ.11ಕ್ಕೆ ಇಳಿದಿದೆ. ರಾಜ್ಯದ ಆದಾಯ ಹಿಂದಿನ ವೇಗದಲ್ಲೇ ಮುಂದುವರಿದಿದ್ದರೆ 2024-25ರಲ್ಲಿ ರಾಜ್ಯದ ಆದಾಯ 1,07,846 ಕೋಟಿ ರೂ. ಆಗಬೇಕಿತ್ತು. ವಾಸ್ತವ ಆದಾಯ 77,169 ಕೋಟಿ ರೂ. ಮಾತ್ರ. ಒಂದೇ ವರ್ಷದಲ್ಲಿ ರಾಜ್ಯದ ಆದಾಯ 30,677 ಕೋಟಿ ರೂ. ಖೋತಾ ಆಗಿದೆ. ಇದೇ ರೀತಿ 2023-24ರಲ್ಲಿ 24,170 ಕೋಟಿ ರೂ. ಹಾಗೂ 2022-23ರಲ್ಲಿ 22,654 ಕೋಟಿ ರೂ. ಖೋತಾ ಆಗಿತ್ತು ಎಂದು ಸಚಿವರು ಮಾಹಿತಿ ನೀಡಿದರು.

ಜಿಎಸ್‌ಟಿ ಜಾರಿಯಾದ ನಂತರ 2016-17ರಿಂದ 2024-25ಕ್ಕೆ ಹೋಲಿಸಿದರೆ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಪಾಲು ವಾರ್ಷಿಕ 21,977 ಕೋಟಿ ರೂ. ಕಡಿತವಾಗಿದೆ. ಇನ್ನು ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ರಾಜ್ಯಕ್ಕೆ ಬರುವ ಅನುದಾನದಲ್ಲಿ ವಾರ್ಷಿಕ 18,870 ಕೋಟಿ ರೂ. ಕಡಿಮೆ ಆಗಿದೆ. ಒಟ್ಟಾರೆ ಕರ್ನಾಟಕದ ಬೊಕ್ಕಸಕ್ಕೆ ಪ್ರತಿ ವರ್ಷ 70,000 ಕೋಟಿ ರೂ. ಖೋತಾ ಆಗುತ್ತಿದೆ. ಇದೀಗ ಜಿಎಸ್‌ಟಿ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ 15 ಸಾವಿರ ಕೋಟಿ ರೂ. ಆದಾಯ ಖೋತಾ ಆಗಲಿದೆ ಎಂದು ಕೃಷ್ಣಬೈರೇಗೌಡ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣ, ಕೌಶಲ ಕ್ಷೇತ್ರದ ಮೇಲೆ ಬಂಡವಾಳ ಹೂಡಿಕೆ ಮಾಡಿದ ಪರಿಣಾಮ ಜಿಎಸ್‌ಟಿ ಹೆಚ್ಚಿಗೆ ಸಂಗ್ರಹವಾಗುತ್ತಿದೆ. ಇದೀಗ ಇಲ್ಲಿನ ದುಡಿಮೆಯ ಲಾಭವನ್ನು ಬೇರೆ ರಾಜ್ಯಗಳು ಸವಿಯುತ್ತಿವೆ. ಭವಿಷ್ಯದಲ್ಲಿ ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ಒಳಗಾದರೆ ದೇಶಕ್ಕೆ ನಷ್ಟವಾಗುತ್ತದೆ. ಆದಾಯ ಕೊರತೆ ಉಂಟಾಗಿ ರಾಜ್ಯ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತೆ ಎಂಬ ಪದ ಅರ್ಥ ಕಳೆದುಕೊಳ್ಳುತ್ತದೆ. ಸಹಕಾರಿ ಒಕ್ಕೂಟವಾದ ಪದಗಳಲ್ಲಿ ಮಾತ್ರವಲ್ಲದೆ ಕೆಲಸದಲ್ಲೂ ಚಾಲ್ತಿ ಇದ್ದರೆ ಮಾತ್ರ ಸ್ವಾಯತ್ತತೆ ಉಳಿಯಲು ಸಾಧ್ಯ ಎಂದು ಸಚಿವ ಕೃಷ್ಣಬೈರೇಗೌಡ ವ್ಯಾಖ್ಯಾನಿಸಿದರು.

ಮಾಹಿತಿ ನೀಡದ ಕೇಂದ್ರ

ಪ್ರಸ್ತಾವಿತ ಜಿಎಸ್‌ಟಿ ದರ ಸರಳೀಕರಣದಿಂದ ಆಗುವ ಅಂದಾಜು ಆದಾಯ ಖೋತಾ ಕುರಿತ ಮಾಹಿತಿಯನ್ನು ಕೇಂದ್ರ ಸರ್ಕಾರ ಈವರೆಗೆ ನೀಡಿಲ್ಲ. ಕೆಲವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಧ್ಯಯನ ವರದಿ ಪ್ರಕಾರ ಕೇಂದ್ರಕ್ಕೆ ಒಂದೂವರೆಯಿಂದ 2 ಲಕ್ಷ ಕೋಟಿ ರೂ. ಆದಾಯ ಕಡಿಮೆ ಆಗಲಿದೆ. ಪರಿಣಾಮ ಪ್ರತಿ ರಾಜ್ಯಗಳಿಗೆ ಶೇ.14 ಆದಾಯ ಖೋತಾ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ.

ಕೇಂದ್ರದ ಆದಾಯ ಮೂಲವೇ ಬೇರೆ

ಕೇಂದ್ರ ಸರ್ಕಾರದ ಆದಾಯಕ್ಕೆ ಜಿಎಸ್‌ಟಿ ಪಾಲು ಶೇ.28 ಮಾತ್ರ. ಉಳಿದ ಶೇ.72 ಆದಾಯವನ್ನು ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡಿವಿಡೆಂಡ್, ಕಾರ್ಪೋರೇಟ್ ತೆರಿಗೆ ಹಾಗೂ ವಿವಿಧ ಸೆಸ್‌ಗಳಿಂದ ಸಂಗ್ರಹ ಮಾಡಲಿದೆ. ಸೆಸ್‌ನಲ್ಲಿಯೇ ಶೇ.17 ರಿಂದ ಶೇ.20 ಆದಾಯ ಗಳಿಸುತ್ತದೆ. ಸೆಸ್‌ನಿಂದ 6 ಲಕ್ಷ ಕೋಟಿ ರೂ. ಸಂಗ್ರಹಿಸುತ್ತಿದ್ದು, 1 ರೂಪಾಯಿಯನ್ನೂ ರಾಜ್ಯಗಳಿಗೆ ಹಂಚುವುದಿಲ್ಲ. ಆದರೆ, ರಾಜ್ಯಗಳ ಆದಾಯದ ಮೂಲ ಜಿಎಸ್‌ಟಿ ಪಾಲು ಶೇ.50 ಆಗಿದ್ದು, ಅಭಿವೃದ್ಧಿಗಾಗಿ ಮತ್ತು ಆದಾಯ ಸಂಗ್ರಹಕ್ಕೆ ಜಿಎಸ್‌ಟಿಯನ್ನೇ ಅವಲಂಬಿಸಬೇಕು. ಇದೀಗ ರಾಜ್ಯಗಳ ಆದಾಯದ ಶೇ.20 ನಷ್ಟವಾದರೆ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕೃಷ್ಣಬೈರೇಗೌಡ ಕಳವಳ ವ್ಯಕ್ತಪಡಿಸಿದರು.

ಸುಧಾರಣೆ ಆಗಿಲ್ಲ

ಜಿಎಸ್‌ಟಿ ಜಾರಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಕಳೆದ 7-8 ವರ್ಷಗಳಲ್ಲಿ ಇದು ಸುಳ್ಳಾಗಿದೆ. ಜಿಎಸ್‌ಟಿಗೂ ಮೊದಲು ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1 ಇತ್ತು. ಈಗ ಜಿಎಸ್‌ಟಿ ಕೊಡುಗೆ ಶೇ.5.8 ಮಾತ್ರ. ಅದೇ ರೀತಿ ವ್ಯಾಟ್ ಸಮಯದಲ್ಲಿ ರಾಜ್ಯದ ನಿವ್ವಳ ಉತ್ಪಾದನ ದರ (ಜಿಡಿಪಿ) ಶೇ. 3.6 ಇತ್ತು. ಆದರೆ, ಪ್ರಸ್ತುತ ಶೇ.2.9ಕ್ಕೆ ಇಳಿದಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರ ಸರ್ಕಾರದ ಜಿಎಸ್‌ಟಿ ದರ ಸರಳೀಕರಣ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ. ಆದರೆ, ಇದರಿಂದ ರಾಜ್ಯಗಳಿಗೆ ಆಗುವ ತೆರಿಗೆ ಖೋತಾ ತುಂಬಿಕೊಡಬೇಕು. ಜತೆಗೆ ಇದರ ಲಾಭ ಜನಸಾಮಾನ್ಯರಿಗೆ ಸಿಗಬೇಕೇ ಹೊರತು ಕಂಪನಿಗಳಿಗೆ ಅಲ್ಲ.

ಕೃಷ್ಣಬೈರೇಗೌಡ, ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net