ದಿನಬಳಕೆ ವಸ್ತುಗಳ ಮೇಲಿನ ಜಿಎಸ್​ಟಿ ಕಡಿತ; ಶೇ. 12ರಿಂದ ಶೇ. 5ಕ್ಕೆ ಇಳಿಸಲು ಕೇಂದ್ರ ಚಿಂತನೆ

GST
Published on

ನವದೆಹಲಿ: ಕೆಲವು ನಿತ್ಯೋಪಯೋಗಿ ವಸ್ತುಗಳ ಮೇಲೆ ಇರುವ ಶೇ. 12ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಶೇ. 5ಕ್ಕೆ ಇಳಿಸಲು ಅಥವಾ ಶೇ. 12ರ ಸ್ಲಾ್ಯಬ್​ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಕ್ರಮ ಜಾರಿಗೆ ಬಂದರೆ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದ ಕುಟುಂಬಗಳ ದೈನಂದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಸರ್ಕಾರಕ್ಕೆ 40ರಿಂದ 50 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಈ ಕುರಿತ ಅಂತಿಮ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಈ ತಿಂಗಳ ಕೊನೆಗೆ ನಡೆಯಲಿರುವ 56ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

ಆರೋಗ್ಯ ವಿಮೆ ಮೇಲಿನ ಜಿಎಸ್​ಟಿ ಈಗ ಶೇ. 18ರಷ್ಟಿದ್ದು ಅದನ್ನು ಇಳಿಸುವ ಸಾಧ್ಯತೆ ಇದೆ. ಜೀವವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲಿನ ತೆರಿಗೆ ವಿಷಯವೂ ಚರ್ಚೆಗೆ ಬರಬಹುದು. ವಾಣಿಜ್ಯ ಡ್ರೋನ್​ಗಳ ಮೇಲಿನ ಜಿಎಸ್​ಟಿ ದರವನ್ನು ಶೇ. 28ರಿಂದ ಶೇ. 5ಕ್ಕೆ ಇಳಿಸುವ ಪ್ರಸ್ತಾವನೆಯೂ ಇದೆ. ಪ್ರಸ್ತುತ, ವ್ಯಾಪಾರಕ್ಕೆ ಮತ್ತು ವೈಯಕ್ತಿಕ ಕಾರಣಕ್ಕೆ ಬಳಕೆ ಆಗುತ್ತಿರುವ ಡ್ರೋನ್​ಗಳಿಗೆ ಪ್ರತ್ಯೇಕ ದರಗಳಿದ್ದು ಇದರಿಂದ ಉದ್ಯಮದಲ್ಲಿ ಗೊಂದಲ ಉಂಟಾಗಿದೆ. ಆನ್​ಲೈನ್ ಗೇಮಿಂಗ್, ಇ-ಕಾಮರ್ಸ್, ರಿಯಲ್ ಎಸ್ಟೇಟ್, ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಜಿಎಸ್​ಟಿ ನಿಯಮಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.

ಯಾವುದಕ್ಕೆ ಅನ್ವಯ?: ಈಗ ಶೇ. 12 ಜಿಎಸ್​ಟಿ ಇರುವ ವಸ್ತುಗಳು ಇಂತಿವೆ. ಟೂಥ್​ಪೇಸ್ಟ್, ಟೂಥ್​ಪೌಡರ್, ಸ್ಯಾನಿಟರಿ ನ್ಯಾಪ್ಕಿನ್, ಅಲ್ಯುಮಿನಿಯಂ-ಸ್ಟೀಲ್ ಅಡುಗೆ ಪಾತ್ರೆಗಳು, ಸಿದ್ಧ ಉಡುಪು, ಶೂ, ಕೊಡೆ, ಹೊಲಿಗೆಯಂತ್ರ, ಕುಕ್ಕರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಗೀಸರ್, ಬೈಸಿಕಲ್, ಹೇರ್ ಆಯಿಲ್, ಸಾಬೂನುಗಳು, ವಾಟರ್​ಫಿಲ್ಟರ್, ವ್ಯಾಕ್ಯೂಂಕ್ಲೀನರ್, ವಾಷಿಂಗ್​ವುಷಿನ್, ವ್ಯಾಕ್ಸಿನ್​ಗಳು, ಕೆಲವು ನಿರ್ದಿಷ್ಟ ಡಯಗ್ನೋಸ್ಟಿಕ್ ಕಿಟ್​ಗಳು, ಆಯುರ್ವೆದ, ಯುನಾನಿ ಔಷಧಗಳು, ಎಕ್ಸರ್​ಸೈಜ್ ಬುಕ್ಸ್, ಜಾಮೆಟ್ರಿ ಬಾಕ್ಸ್, ಡ್ರಾಯಿಂಗ್-ಕಲರಿಂಗ್ ಬುಕ್ ಇತ್ಯಾದಿ.

ಮದ್ಯ, ಫ್ಯಾನ್ಸಿ ಕಾರು ದುಬಾರಿ?

ಜಿಎಸ್​ಟಿ ವ್ಯವಸ್ಥೆಯಲ್ಲಿ ತಂಬಾಕು ಉತ್ಪನ್ನಗಳು ಮತ್ತು ಆಟೋಮೊಬೈಲ್​ಗಳ ಮೇಲೆ ಆರೋಗ್ಯ ಮತ್ತು ಶುದ್ಧ ಇಂಧನ ಸೆಸ್ ವಿಧಿಸುವ ಪ್ರಸ್ತಾವನೆ ಅಂಗೀಕಾರಗೊಂಡರೆ ಸಿಗರೇಟ್, ಕಾರ್ಬೆನೇಟೆಡ್ ಪಾನೀಯ, ದುಬಾರಿ ಕಾರು ಮುಂತಾದವು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕೇಂದ್ರ ವಿತ್ತ ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಅಧ್ಯಕ್ಷತೆಯ ಸಚಿವರ ಗುಂಪು ಈ ಕುರಿತು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net