ತೆರಿಗೆ ವಂಚನೆ ಆರೋಪ : ಉದ್ಯಮಿ ಬಂಧಿಸಿದ ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು

gst
Published on

ಬೆಂಗಳೂರು: ಕೋಟ್ಯಂತರ ರೂ.ಜಿಎಸ್‌ಟಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಉದ್ಯಮಿಯೊಬ್ಬನನ್ನು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಬೆಂಗಳೂರು ಘಟಕವು ಬಂಧಿಸಿದೆ.

ಮೈಸೂರಿನ ಬನ್ನಿಮಂಟಪ ಲೇಔಟ್ ನಿವಾಸಿ ಮೊಹಮ್ಮದ್ ಕಮ್ರಾನ್(೨೪) ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಅಧಿಕಾರಿಗಳು ಅವರಿಂದ ಆರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಡಿಜಿಜಿಐ ಅಧಿಕಾರಿಗಳು ದಾಳಿ ಮಾಡಿದ ನಂತರ ಕಮ್ರಾನ್ ಮೈಸೂರಿನಿಂದ ಪರಾರಿಯಾಗಿದ್ದ. ಈತ ಮುಂಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಕಮ್ರಾನ್ ತಂದೆ ಅಕ್ರಮ್ ಪಾಷಾಗಾಗಿ ಹುಡುಕಾಟ ನಡೆಸಲಾಗಿದೆ.

೧೩ ಸ್ಥಳಗಳ ಮೇಲೆ ದಾಳಿ ನಡೆದಿತ್ತು:

ಸೆ.೧೦ ರಂದು ಉದ್ಯಮಿ ಕಮ್ರಾನ್ ಮತ್ತು ಈತನ ತಂದೆ ಅಕ್ರಮ್ ಪಾಷಾಗೆ ಸೇರಿದ್ದ ಬೆಂಗಳೂರಿನ ಮೂರು ಮತ್ತು ಮೈಸೂರಿನ ೧೦ ಸೇರಿ ಒಟ್ಟು ೧೩ ಸ್ಥಳಗಳಲ್ಲಿ ಡಿಜಿಜಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಕಮ್ರಾನ್ ಮನೆಗಳು, ಕಚೇರಿಗಳು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾಗ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್‌ನಲ್ಲಿ ವಂಚನೆ ಮಾಡಿರುವುದು ಕಂಡು ಬಂದಿತ್ತು.

ಅಕ್ರಮ್ ಪಾಷಾ ‘ಎಕೆ ಸ್ಟೀಲ್ಸ್’ ಎಂಬ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದಾರೆ. ಕಮ್ರಾನ್ ಬನ್ನಿಮಂಟಪದ ರಸ್ತೆಯಲ್ಲಿ ಎಂ.ಕೆ ಟ್ರೇಡರ್ಸ್ ಎಂಬ ಸಂಸ್ಥೆ ಹೊಂದಿದ್ದಾರೆ. ಉಕ್ಕುವಿನ ವ್ಯವಹಾರ ಮತ್ತು ಸಕ್ಯೆಾಪ್ ವಸ್ತುಗಳನ್ನು ವ್ಯವಹಾರ ನಡೆಸುತ್ತಾರೆ. ಡಿಜಿಜಿಐ ದಾಳಿ ವೇಳೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವೂ ಈ ಇಬ್ಬರು ಮತ್ತು ಇವರ ಸಿಬ್ಬಂದಿ ಮೇಲಿದೆ. ಈ ಸಂಬಂಧ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮ್ರಾನ್, ಕಂಪನಿಯ ಸಿಬ್ಬಂದಿ ಪಾಷಾ, ಪಾಷಾ ಅವರ ಪತ್ನಿ ಫರ್ಜಾನ್ ಬಾನು ಮತ್ತು ಮಗಳು ರ್ಜಾನ್ ಭಾನು ಸೇರಿದಂತೆ ಆರು ಜನರನ್ನು ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಾಳಿಯ ವೇಳೆಯಲ್ಲಿ ರ್ಜಾನ್ ಭಾನು ಮನೆಯಿಂದ ಪರಾರಿಯಾಗಿದ್ದು, ಸಿಸಿ ಕ್ಯಾಮರಾಗಳ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.

400 ಕೋಟಿಯಷ್ಟು ತೆರಿಗೆ ವಂಚನೆ:

ಈ ಇಬ್ಬರು ಉದ್ಯಮಿಗಳು ನಕಲಿ ಇನ್‌ವಾಯ್ಸಗಳನ್ನು ನೀಡಿರುವುದನ್ನು ಡಿಜಿಜಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಇನ್‌ವಾಯ್ಸಗಳಿಂದ ಶೇ.೧೮ ಜಿಎಸ್‌ಟಿ ಅಂತೆ ಅಂದಾಜು 20 ಕೋಟಿ ರೂ.ಗಳಷ್ಟು ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿ ನಕಲಿ ಇನ್‌ವಾಯ್ಸಗಳನ್ನು ನೀಡಿದ್ದಾರೆ. ಐಪಿ ವಿಳಾಸ ವಿಶ್ಲೇಷಣೆಯ ಆಧಾರದ ಮೇಲೆ ಈ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. 419 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚನೆ ಮಾಡಲಾಗಿದೆ. 429 ಕೋಟಿ ರೂ.ಗಳಿಗೂ ಹೆಚ್ಚು ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net