

ಬೆಂಗಳೂರು: ಜಿಎಸ್‌ಟಿ ನಕಲಿ ಬಿಲ್ ತಯಾರಕರ ಜಾಲವನ್ನು ಬೇಧಿಸುವಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ (ದಕ್ಷಿಣವಲಯ) ಯಶಸ್ವಿಯಾಗಿದೆ.
ನಕಲಿ ಬಿಲ್ ತಯಾರಕರು ಮ್ಯಾನ್‌ಪವರ್ ಏಜೆನ್ಸಿ ಕಂಪನಿಗಳಿಗೆ ತೆರಿಗೆ ಜಮೆ ಮಾಡಿದಂತೆ ನಕಲಿ ಬಿಲ್ ಸಿದ್ಧಪಡಿಸಿಕೊಡುತ್ತಿದ್ದುದು ದಾಳಿ ವೇಳೆ ಕಂಡುಬಂದಿದ್ದು, ಸೇವಾ ವಲಯದಲ್ಲಿ ಇಂತಹ ದಾಳಿ ನಡೆಸಿ ಪತ್ತೆ ಹಚ್ಚಿರುವುದು ಇದೇ ಮೊದಲ ಬಾರಿಯಾಗಿದೆ.
ಈ ಜಾಲವು ಕುಟುಂಬ ಸದಸ್ಯರ, ಸಂಬಂಧಿಕರ, ಸ್ನೇಹಿತರ ಹಾಗೂ ಇತರೆ ವ್ಯಕ್ತಿಗಳ ಗುರುತು ದಾಖಲಾತಿಗಳನ್ನು ಉಪಯೋಗಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದೂ ಸಹ ಬೆಳಕಿಗೆ ಬಂದಿರುತ್ತದೆ.
ಸುಮಾರು 525 ಕೋಟಿ ರೂ. ನಕಲಿ ವಹಿವಾಟನ್ನು ನಡೆಸಿದ್ದು ಸರ್ಕಾರದ ಬೊಕ್ಕಸಕ್ಕೆ ಸುಮಾರು 90 ಕೋಟಿ ರೂಪಾಯಿಗಳಷ್ಟು ತೆರಿಗೆ ನಷ್ಟವನ್ನು ಉಂಟು ಮಾಡಿರುವುದಾಗಿ ಅಂದಾಜಿಸಲಾಗಿದೆ.
ಈ ಸಂಬಂಧ ಜಾರಿ ವಿಭಾಗದ ಅಧಿಕಾರಿಗಳು ನಕಲಿ ಜಾಲದ ಕೇಂದ್ರ ವ್ಯಕ್ತಿಗಳಾದ ಎಚ್.ಎಂ.ಗುರುಪ್ರಕಾಶ್, ಮಂಜುನಾಥಯ್ಯರನ್ನು ಬುಧವಾರ ನಸುಕಿನಲ್ಲಿ ಬಂಧಿಸಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸಲು ಸಿದ್ಧತೆ ನಡೆಸಿದೆ.
ನಕಲಿ ಬಿಲ್ ತಯಾರಿಕೆ ಹಾಗೂ ತೆರಿಗೆ ತಪ್ಪಿಸುವಿಕೆಯು ಜಿಎಸ್‌ಟಿ ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಬಂಧನ, ಅಭಿಯೋಜನೆ ಸೆರೆವಾಸ, ದಂಡ, ಜುಲ್ಮಾನೆ ವಿಧಿಸುವಿಕೆ, ಸರಕುಗಳ ಮುಟ್ಟುಗೋಲು, ಸ್ವತ್ತುಗಳ ಮತ್ತು ಬ್ಯಾಂಕ್ ಖಾತೆಗಳ ಮುಟ್ಟುಗೋಲು ಮುಂತಾದ ತೀಕ್ಷ್ಣ ಕಾನೂನು ಕ್ರಮಗಳು ಕೈಗೊಳ್ಳುವುದನ್ನು ಒಳಗೊಂಡಿರುತ್ತದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.