

ನವದೆಹಲಿ: ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಎನ್ಡಿಎ ಸರ್ಕಾರ ಹಣಕಾಸು ಬಜೆಟ್ ಮಂಡಿಸಲು ಸಜ್ಜಾಗುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳು, ರೈತರು, ಜನಸಾಮಾನ್ಯರ ಹೊರೆ ಸಡಿಲಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಶನಿವಾರ ದೆಹಲಿಯಲ್ಲಿ ನಡೆದ 53ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆ ಹೊರಡಿಸಿದರು.
ವಿದ್ಯಾರ್ಥಿಗಳಿಗೆ ಸಿಹಿ: ಭಾರತದ ಬಹುತೇಕ ಕಡೆ ಗ್ರಾಮೀಣ ವಿದ್ಯಾರ್ಥಿಗಳು ಹಾಸ್ಟೆಲ್ ಅವಲಂಬಿಸಿದ್ದಾರೆ. ಕೆಲವರಿಗೆ ಸರ್ಕಾರಿ ಕಾಲೇಜು ಹಾಸ್ಟೆಲ್ಗಳಲ್ಲಿ ಸೀಟು ಸಿಕ್ಕರೆ ಇನ್ನು ಹಲವರು ಶಿಕ್ಷಣ ಸಂಸ್ಥೆಗಳ ಹೊರಗಿರುವ ಹಾಸ್ಟೆಲ್ ಅವಲಂಬಿಸಬೇಕಾಗುತ್ತದೆ. ಇಂತಹ ಪ್ರತಿ ವಿದ್ಯಾರ್ಥಿಗೆ 20,000 ರೂ.ವರೆಗೆ ಜಿಎಸ್ಟಿ ವಿನಾಯಿತಿ ನೀಡಲು ಸಮಿತಿ ಉದ್ದೇಶಿಸಿದೆ. ಆದರೆ ಈ ಸೌಲಭ್ಯ ಪಡೆಯಲು ವಿದ್ಯಾರ್ಥಿ ನಿರಂತರವಾಗಿ ಕನಿಷ್ಠ 90 ದಿನ ಹಾಸ್ಟೆಲ್ನಲ್ಲಿರಬೇಕಾಗುತ್ತದೆ. ಈ ತೀರ್ವನದ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ನಿರ್ಮಲಾ ಸಮಿತಿ ಸಭೆ ಬಳಿಕ ಮಾಧ್ಯಮಕ್ಕೆ ವಿವರಿಸಿದರು.
ಎಲ್ಲಾ ಸೋಲಾರ್ ಕುಕ್ಕರ್ಗಳ (ಒಂದು ಅಥವಾ ಎರಡು ಇಂಧನ ಮೂಲಗಳಿದ್ದರೂ) ಮೇಲೆ ಹಾಗೂ ಉಕ್ಕು, ಕಬ್ಬಿಣ, ಅಲ್ಯೂಮಿನಿಯಂನ ಎಲ್ಲಾ ಹಾಲಿನ ಕ್ಯಾನ್ಗಳ ಮೇಲೆ ಏಕರೂಪದ 12% ಜಿಎಸ್ಟಿ ದರ ವಿಧಿಸಲು ಜಿಎಸ್ಟಿ ಸಮಿತಿ ಶಿಫಾರಸು ಮಾಡಿದೆ. ದೇಶದ ಯಾವುದೇ ಭಾಗದಲ್ಲಿರಲಿ, ಎಲ್ಲಾಹಾಲಿನ ಕ್ಯಾನ್ಗಳಿಗೆ ಏಕರೂಪದ ಜಿಎಸ್ಟಿ ದರ ವಿಧಿಸುವುದರಿಂದ ಯಾವುದೇ ವಿವಾದ ಉದ್ಭವಿಸದಂತೆ ನೋಡಿ ಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ಸೇಬು ರೈತರಿಗೆ ಗಿಫ್ಟ್: ರಟ್ಟಿನ ಪೆಟ್ಟಿಗೆಗಳು ಮತ್ತು ಸುಕ್ಕುಗಟ್ಟದ ಕಾಗದ ಅಥವಾ ಕಾಗದದ ಹಲಗೆಗಳ ಮೇಲೆ ಮೇಲೆ ಶೇ.12 ರಷ್ಟು ಏಕರೂಪದ ಜಿಎಸ್ಟಿ ವಿಧಿಸುವ ನಿರ್ಧಾರ ಹೊರಬಿದ್ದಿದೆ. ಇದರಿಂದಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಕಾಶ್ಮೀರದ ಸೇಬು ಬೆಳೆಗಾರರಿಗೆ ಸಹಾಯವಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಮತ್ತೊಂದೆಡೆ ಅಗ್ನಿಶಾಮಕ ನೀರಿನ ಸಿಂಪರಣೆ ಸೇರಿದಂತೆ ಎಲ್ಲಾ ರೀತಿಯ ಸ್ಪ್ರಿಂಕ್ಲರ್ಗಳ ಮೇಲೆ 12% ಜಿಎಸ್ಟಿ ವಿಧಿಸುವುದಾಗಿ ಜಿಎಸ್ಟಿ ಸಮಿತಿ ಸ್ಪಷ್ಟಪಡಿಸಿದೆ.
ಜಿಒಎಂಗೆ ಬಿಹಾರ ಡಿಸಿಎಂ: ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಅವರನ್ನು ದರ ಸ್ಥಿರೀಕರಣ ಕುರಿತ ಸಚಿವರ ಗುಂಪಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಮಂತ್ರಿಗಳ ಮನವಿ: ವಿವಿಧ ರಾಜ್ಯಗಳ ಮಂತ್ರಿಗಳು ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಹಣಕಾಸು ಸಹಾಯದ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೂಡ ಪ್ರಸ್ತಾಪಿಸಿದರು. ಮುಂಬರುವ ಬಜೆಟ್ನಲ್ಲಿ ತಮ್ಮ ರಾಜ್ಯಗಳಿಗೆ ಅನುಕೂಲ ಆಗಬಲ್ಲ ಕೆಲ ಮನವಿಗಳನ್ನೂ ಸಲ್ಲಿಸಿದರು.
ಆಧಾರ್ ಬಯೋಮೆಟ್ರಿಕ್! : ದೇಶಾದ್ಯಂತ ಆಧಾರ್ ಬಯೋಮೆಟ್ರಿಕ್ ಆಧಾರಿತ ವ್ಯಕ್ತಿಗಳ ಆಧಾರ್ ದೃಢೀಕರಣ ಜಾರಿ ಮಾಡುವ ಉದ್ದೇಶವಿದೆ. ಇದರಿಂದ ಅಕ್ರಮ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ಳನ್ನು ತಪ್ಪಿಸಲು ಸರ್ಕಾರಕ್ಕೆ ಸಹಾಯವಾಗಲಿದೆ ಎಂದು ನಿರ್ಮಲಾ ವಿವರಿಸಿದರು. ಸರ್ಕಾರಿ ವ್ಯಾಜ್ಯಗಳನ್ನು ಕಡಿಮೆ ಮಾಡಲು, ಜಿಎಸ್ಟಿ ಸಮಿತಿಯು ಅಪೆಲೆಟ್ ಟ್ರಿಬ್ಯುನಲ್ಗೆ ರೂ. 20 ಲಕ್ಷ, ಹೈಕೋರ್ಟ್ಗೆ ರೂ. 1 ಕೋಟಿ ಮತ್ತು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ರೂ. 2 ಕೋಟಿಯ ವಿತ್ತೀಯ ಮಿತಿಯನ್ನು ಶಿಫಾರಸು ಮಾಡಿದೆ.
ಜಿಎಸ್ಟಿ ವ್ಯಾಪ್ತಿಗೆ ತೈಲ? : ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಪ್ರಶ್ನೆಗೂ ನಿರ್ಮಲಾ ಪ್ರತಿಕ್ರಿಯಿಸಿದರು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಉದ್ದೇಶಿಸಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಬೇಕು ಎಂಬ ಅಭಿಪ್ರಾಯವಿದೆ. ಏಲ್ಲಾ ರಾಜ್ಯಗಳು ಒಟ್ಟಾಗಿ ಸೇರಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿಗೆ ಸೇರಿಸಬೇಕು ಎಂಬ ಬಗ್ಗೆ ತಮ್ಮ ತೀರ್ಮಾನ ಪ್ರಕಟಿಸಬೇಕು. ಜಿಎಸ್ಟಿ ವ್ಯಾಪ್ತಿಗೆ ತರುವುದು ಕೇಂದ್ರದ ನಿಲುವು ಕೂಡ ಹೌದೆಂದರು.
ರೈಲ್ವೆಯಲ್ಲೂ ಅನುಕೂಲ : ಇನ್ನು ಭಾರತದ ಬಡ, ಮಧ್ಯಮ ವರ್ಗ ಹೆಚ್ಚು ಅವಲಂಬಿಸಿರುವ ರೈಲ್ವೆ ವಲಯದಲ್ಲೂ ಹಲವು ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಭಾರತೀಯ ರೈಲ್ವೆ ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳಾದ ಪ್ಲಾಟ್ಫಾಮ್ರ್ ಟಿಕೆಟ್ಗಳ ಮಾರಾಟ, ವಿಶ್ರಾಂತಿ ಕೊಠಡಿಗಳ ಸೌಲಭ್ಯ, ಕಾಯುವ ಕೊಠಡಿಗಳು, ಕ್ಲಾಕ್ರೂಮ್ ಸೇವೆ ಹಾಗೂ ಬ್ಯಾಟರಿ ಚಾಲಿತ ಕಾರ್ ಸೇವೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲು ಸಮಿತಿ ನಿರ್ಧರಿಸಿದೆ.