

ನವದೆಹಲಿ: ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ಟಿ) ತನ್ನ ಅರ್ಧ ದಶಕದ ಪ್ರಯಾಣವನ್ನು ಹಲವು ಹಿಟ್ಗಳು ಮತ್ತು ಕೆಲವು ಮಿಸ್ಗಳೊಂದಿಗೆ ಜೂನ್ 30ರಂದು ಪೂರ್ಣಗೊಳಿಸಿತು.
ತೆರಿಗೆ ಸಂಗ್ರಹಣೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರೊಂದಿಗೆ ಹಾಗೂ ಪ್ರತಿ ತಿಂಗಳು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಿಸುವ ಮೂಲಕ ಒಂದು ಮಾದರಿ ಬದಲಾವಣೆಯನ್ನೇ ಜಿಎಸ್ಟಿ ಮಾಡಿದೆ. ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ಜಿಎಸ್ಟಿಯನ್ನು 2017ರ ಜುಲೈ 1ರ ಮಧ್ಯರಾತ್ರಿಯಂದು ರಾಷ್ಟ್ರವ್ಯಾಪಿಯಾಗಿ ಜಾರಿಗೆ ತರಲಾಯಿತು.
ಜಿಎಸ್ಟಿ ಅಡಿಯಲ್ಲಿ ನಾಲ್ಕು ಹಂತದ ತೆರಿಗೆ ದರಗಳಿವೆ. ಅಗತ್ಯ ವಸ್ತುಗಳ ಮೇಲೆ ಶೇ 5ರಷ್ಟು ದರವಿದ್ದರೆ, ಕಾರಿನಂತಹ ಸರಕಿನ ಮೇಲೆ ಶೇ. 28ರಷ್ಟು ತೆರಿಗೆ ಹಾಕಲಾಗುತ್ತದೆ. ಇನ್ನಿತರ ವಸ್ತುಗಳ ಮೇಲೆ ಶೇ. 12 ಮತ್ತು 18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಜಿಎಸ್ಟಿ ಜಾರಿಯ ಪೂರ್ವದಲ್ಲಿ, ವ್ಯಾಟ್, ಅಬಕಾರಿ, ಸಿಎಸ್ಟಿ ವಿಧಿಸುತ್ತಿದ್ದ ಪರಿಣಾಮವಾಗಿ ಗ್ರಾಹಕರು ಸರಾಸರಿಯಾಗಿ ಶೇ. 31ರಷ್ಟು ತೆರಿಗೆ ಪಾವತಿಸುವ ಪರಿಸ್ಥಿತಿ ಇತ್ತು. ಜಿಎಸ್ಟಿಯು ಹಣಕಾಸಿನ ಒಕ್ಕೂಟದ ಅಭೂತಪೂರ್ವ ನಿರ್ವಹಣೆಯ ಪ್ರತೀಕವಾಗಿದೆ.
ಏಕೆಂದರೆ, ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು ಸೇರಿ ಜಿಎಸ್ಟಿ ಮಂಡಳಿ ರಚಿಸಿಕೊಂಡಿದ್ದು, ಸುದೀರ್ಘ ಸಮಾಲೋಚನೆಗಳ ಮೂಲಕ ಈ ಹೊಸ ತೆರಿಗೆ ಪದ್ಧತಿಯ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುತ್ತಿವೆ. ಜಿಎಸ್ಟಿ ಮಂಡಳಿ ಇದುವರೆಗೆ 47 ಬಾರಿ ಸಭೆ ನಡೆಸಿದೆ. ಪ್ರತಿ ತಿಂಗಳಿಗೆ 1 ಲಕ್ಷ ಕೋಟಿ ರೂ. ಇರುವ ಜಿಎಸ್ಟಿ ಸಂಗ್ರಹವನ್ನು 1.4 ಲಕ್ಷ ಕೋಟಿ ರೂ.ಗೆ ಕೊಂಡೊಯ್ಯಲು ಯೋಜನೆ ರೂಪಿಸಿದೆ.
ಇನ್ನಷ್ಟು ಸರಳತೆ ಅಗತ್ಯ: ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ), ‘ಬಹು ತೆರಿಗೆ ಮತ್ತು ಕರಗಳನ್ನು ಜಿಎಸ್ಟಿ ಒಳಗೊಳ್ಳುವ ಮೂಲಕ ಹೊರೆ ಕಡಿಮೆ ಮಾಡಿದೆ. ಪ್ರಾದೇಶಿಕ ಅಸಮತೋಲನ ಮತ್ತು ಅಂತಾರಾಜ್ಯ ಅಡೆತಡೆಗಳನ್ನು ತೆಗೆದುಹಾಕಿದೆ. ಪಾರದರ್ಶಕತೆ ಮತ್ತು ಒಟ್ಟಾರೆ ಆದಾಯ ಸಂಗ್ರಹವನ್ನು ಗಣನೀಯವಾಗಿ ಹೆಚ್ಚಿಸಿದೆ’ ಎಂದು ಟ್ವೀಟ್ ಮಾಡಿದೆ. ಜಿಎಸ್ಟಿ ಆಡಳಿತ ಚುರುಕಿನಿಂದ ಮುನ್ನಡೆದಿದ್ದರೂ, ಸಂಪೂರ್ಣ ಸಾಮರ್ಥ್ಯ ಅಳವಡಿಸಿಕೊಳ್ಳಲು ಮತ್ತು ಇನ್ನಷ್ಟು ಉತ್ತಮ-ಸರಳ ತೆರಿಗೆ ರೂಪಿಸಲು ಕ್ರಮಿಸಬೇಕಾದ ದಾರಿ ಸಾಕಷ್ಟಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪರಿಣತರು ಏನಂತಾರೆ?: ಕಳೆದ ಐದು ವರ್ಷಗಳಲ್ಲಿ, ಸಕಾಲಿಕ ಸ್ಪಷ್ಟೀಕರಣ ಮತ್ತು ತಿದ್ದುಪಡಿಗಳ ಮೂಲಕ ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಗ್ಗಿಸಲಾಗಿದೆ. ಆದರೂ, ಅನಧಿಕೃತ ಮತ್ತು ಶೋಕಾಸ್ ನೋಟಿಸ್ಗಳಿಗೆ ಸಂಬಂಧಿಸಿದಂತೆ ತೆರಿಗೆದಾರರು ಎದುರಿಸುತ್ತಿರುವ ಕೆಲವು ಸಂಕಷ್ಟಗಳನ್ನು ಜಿಎಸ್ಟಿ ಮಂಡಳಿಯು ತ್ವರಿತವಾಗಿ ಪರಿಹರಿಸಬೇಕು. ಪೆಟ್ರೋಲ್, ಡೀಸೆಲ್, ವಿದ್ಯುತ್ ಮುಂತಾದ ಇಂಧನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದು ದೇಶಾದ್ಯಂತ ಏಕರೂಪ ತೆರಿಗೆಯನ್ನು ವಿಸ್ತರಿಸಬೇಕು ಎಂದು ಪರಿಣತರು ಹೇಳುತ್ತಾರೆ.