ಮೇನಲ್ಲಿ ₹2.01 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ

GDP
Published on

ನವದೆಹಲಿ: ಸರ್ಕಾರವು ಮೇ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಯಿಂದ 2.01 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. 2024ರ ಮೇನಲ್ಲಿ 1.73 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ವಾರ್ಷಿಕ ಆಧಾರದಲ್ಲಿ ಈ ಬಾರಿಯ ಮೇನಲ್ಲಿ ಜಿಎಸ್​ಟಿ ಸಂಗ್ರಹ ಶೇಕಡ 16.4ರಷ್ಟು ಹೆಚ್ಚಳ ಕಂಡಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದಕ್ಕೂ ಮೊದಲು ಅಂದರೆ 2025ರ ಏಪ್ರಿಲ್​ನಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿತ್ತು. ಜಿಎಸ್​ಟಿ ವರಮಾನ ಸಂಗ್ರಹವು ಸತತ ಎರಡನೇ ತಿಂಗಳಲ್ಲೂ 2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿರುವುದು ಗಮನಾರ್ಹ. ಜಿಎಸ್​ಟಿ ಸಂಗ್ರಹ ಪ್ರಮಾಣವು ಇದೇ ಮಟ್ಟದಲ್ಲಿ ಇನ್ನೂ ಒಂದೆರಡು ತಿಂಗಳು ಮುಂದುವರಿದರೆ, ಜಿಎಸ್​ಟಿ ದರಗಳನ್ನು ಇನ್ನಷ್ಟು ಸರಳಗೊಳಿಸಲು ಸರ್ಕಾರಕ್ಕೆ ಅನುವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜಿಎಸ್​ಟಿ ವರಮಾನ ಸಂಗ್ರಹದಲ್ಲಿನ ಏರಿಕೆಯು ಶೇಕಡ 17ರಿಂದ 25ರವರೆಗೆ ಇದೆ. ಆದರೆ, ಈ ರಾಜ್ಯಗಳಂತೆಯೇ ದೊಡ್ಡ ರಾಜ್ಯಗಳಾಗಿರುವ ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಜಿಎಸ್​ಟಿ ಸಂಗ್ರಹ ಹೆಚ್ಚಳ ಶೇ.6ರವರೆಗೆ ಮಾತ್ರ ಇದೆ. ಮಧ್ಯಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಜಿಎಸ್​ಟಿ ಸಂಗ್ರಹ ಏರಿಕೆ ಪ್ರಮಾಣ ಶೇ.10ರಷ್ಟಿದೆ.

‘ಬೇರೆ ಬೇರೆ ರಾಜ್ಯಗಳ ಜಿಎಸ್​ಟಿ ಸಂಗ್ರಹ ಏರಿಕೆ ಪ್ರಮಾಣದಲ್ಲಿನ ವ್ಯತ್ಯಾಸದ ವಿಚಾರವಾಗಿ, ಆಯಾ ರಾಜ್ಯಗಳಿಗೆ ಮುಖ್ಯವಾದ ವಲಯಗಳನ್ನು ಗಮನದಲ್ಲಿ ಇರಿಸಿಕೊಂಡು ಆಳವಾದ ಪರಿಶೀಲನೆ ಆಗಬೇಕಿದೆ. ದೇಶದಾದ್ಯಂತ ಜಿಎಸ್​ಟಿ ಸಂಗ್ರಹ ಪ್ರಮಾಣ ಒಂದೇ ಆಗಿಲ್ಲ. ಇದಕ್ಕೆ ವಲಯವಾರು ಕಾರಣಗಳು ಇರಬಹುದು. ಇದರ ಬಗ್ಗೆ ದತ್ತಾಂಶ ಆಧರಿಸಿ ವಿಶ್ಲೇಷಣೆ ಆಗಬೇಕಿದೆ’ ಎಂದು ಡೆಲಾಯ್್ಟ ಇಂಡಿಯಾ ಪಾಲುದಾರ ಎಂ.ಎಸ್.ಮಣಿ ಹೇಳಿದ್ದಾರೆ.

ಆಂತರಿಕ ವಹಿವಾಟುಗಳಿಂದ ವರಮಾನ ಏರಿಕೆ

ಈ ವರ್ಷದ ಮೇ ತಿಂಗಳಲ್ಲಿ ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್​ಟಿ ವರಮಾನವು ಶೇ.13.7ರಷ್ಟು ಏರಿಕೆ ಕಂಡಿದ್ದು, ಅಂದಾಜು 1.50 ಲಕ್ಷ ಕೋಟಿ ರೂ.ಗೆ ತಲುಪಿದೆ. ಆಮದು ಮೂಲಕ ಬರುವ ಜಿಎಸ್​ಟಿ ವರಮಾನವು ಶೇಕಡ 25.2ರಷ್ಟು ಹೆಚ್ಚಳ ಕಂಡು 51 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net