ಶೇ. 6.2 ಹೆಚ್ಚಾದ ಜಿಎಸ್​ಟಿ ಸಂಗ್ರಹ

gst
Published on

ನವದೆಹಲಿ: ಜೂನ್​ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ 1.84 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿ ಶೇ. 6.2ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಜೂನ್​ನಲ್ಲಿ ಇದು 1.73 ಲಕ್ಷ ಕೋಟಿ ರೂ. ಆಗಿತ್ತು.

ಮೇ ತಿಂಗಳಿನಲ್ಲಿ 2.01 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್​ನಲ್ಲಿ 2.37 ಲಕ್ಷ ಕೋಟಿ ರೂ.ಗಳ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಜೂನ್​ನಲ್ಲಿ ದೇಶೀಯ ವಹಿವಾಟುಗಳಿಂದ ಒಟ್ಟು ಆದಾಯ 1.38 ಲಕ್ಷ ಕೋಟಿ ರೂ. ಆಗಿದ್ದು, ಶೇ. 4.6ರಷ್ಟು ಏರಿಕೆಯಾಗಿದೆ. ಆಮದುಗಳಿಂದ ಜಿಎಸ್​ಟಿ ಆದಾಯ 45,690 ಕೋಟಿ ರೂ. ಆಗಿದ್ದು, ಶೇ. 11.4ರಷ್ಟು ಏರಿಕೆಯಾಗಿದೆ. ಒಟ್ಟು ಕೇಂದ್ರ ಜಿಎಸ್​ಟಿ ಆದಾಯ 34,558 ಕೋಟಿ ರೂ. ಆಗಿದ್ದು, ರಾಜ್ಯ ಜಿಎಸ್​ಟಿ ಆದಾಯ 43,268 ಕೋಟಿ ರೂ. ಆಗಿದೆ.

ಒಟ್ಟಾರೆ ಜಿಎಸ್​ಟಿ ಸುಮಾರು 93,280 ಲಕ್ಷ ಕೋಟಿ ರೂ.ಗೆ ತಲುಪಿದೆ. ಸೆಸ್​ನಿಂದ 13,491 ಕೋಟಿ ರೂ. ಆದಾಯ ಬಂದಿದೆ. ಒಟ್ಟು ಮರುಪಾವತಿ 25,491 ಕೋಟಿ ರೂ. ತಲುಪಿ, ಶೇ. 28.4ರಷ್ಟು ಏರಿಕೆ ದಾಖಲಿಸಿದೆ. ನಿವ್ವಳ ಜಿಎಸ್​ಟಿ ಸಂಗ್ರಹ 1.59 ಲಕ್ಷ ಕೋಟಿ ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 3.3ರಷ್ಟು ಬೆಳವಣಿಗೆ ದಾಖಲಿಸಿದೆ.

ಕಬ್ಬಿಣ ಅದಿರು ಉತ್ಪಾದನೆ ಅಲ್ಪ ಹೆಚ್ಚಳ

ಈ ಆರ್ಥಿಕ ವರ್ಷದ ಏಪ್ರಿಲ್-ಮೇನಲ್ಲಿ ದೇಶದ ಕಬ್ಬಿಣ ಅದಿರು ಉತ್ಪಾದನೆ ಶೇ. 0.6ರಿಂದ ಸ್ವಲ್ಪ ಏರಿಕೆಯಾಗಿದ್ದು, 53 ದಶಲಕ್ಷ ಮೆಟ್ರಿಕ್ ಟನ್​ಗೆ (ಎಂಎಂಟಿ) ತಲುಪಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 52.7 ಎಂಎಂಟಿ ಆಗಿತ್ತು. ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಜಿಂಕ್ ಕಾನ್ಸೆಂಟ್ರೇಟ್, ಸುಣ್ಣದ ಕಲ್ಲಿನ ಉತ್ಪಾದನೆಯೂ ಏರಿದೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ. ಪ್ರಾಥಮಿಕ ಅಲ್ಯುಮಿನಿಯಂ ಉತ್ಪಾದನೆ 7.07 ಲಕ್ಷ ಟನ್​ಗೆ ತಲುಪಿದ್ದು ಶೇ. 1.3ರಷ್ಟು ಏರಿಕೆಯಾಗಿದೆ. ಶುದ್ಧೀಕೃತ ತಾಮ್ರದ ಉತ್ಪಾದನೆ 0.69 ಎಲ್​ಟಿಯಿಂದ 0.99 ಎಲ್​ಟಿಗೆ ತಲುಪಿ ಶೇ. 43.5 ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net