ಜಿಎಸ್‌ಟಿ ವ್ಯಾಪ್ತಿಗೆ ಇಂಧನ ತನ್ನಿ : ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರ ಸೈಕಲ್ ಜಾಥಾ

7 KGF 1
Published on

ಕೆಜಿಎಫ್ :  ನಗರದ ಸೂರಜ್ ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್‌ ರಸ್ತೆ, ಗೀತಾರಸ್ತೆ ಮುಖಾಂತರ ನಗರಸಭೆವರೆಗೂ ಕಾಂಗ್ರೆಸ್ ಮುಖಂಡರು ಸೈಕಲ್ ಜಾಥಾ ನಡೆಸಿ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿದರು.

ಶಾಸಕಿ ರೂಪಕಲಾ ತಾವೇ ಖರೀದಿಸಿ ತಂದ ಸೈಕಲ್ ಏರಿ ಅಂಬೇಡ್ಕರ್ ಪಾರ್ಕ್ ಮುಂಭಾಗದಲ್ಲಿ ಓಡಿಸುವ ಮೂಲಕ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಜಿಎಸ್‌ಟಿ ವ್ಯಾಪ್ತಿಗೆ ಇಂಧನ ತಂದರೆ, ಇಷ್ಟೊಂದು ಬೆಲೆ ಏರುವುದಿಲ್ಲ. ಅಂತಾರಾಷ್ಟ್ರೀಯ ಬೆಲೆ ಒಂದು ಬ್ಯಾರಲ್‌ಗೆ 53 ಡಾಲರ್ ಇದೆ. 2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಇದೇ ಬೆಲೆ ಇತ್ತು. ಆದರೆ ಈ ರೀತಿ ಬೆಲೆ ಏರಿಕೆ ಮಾಡಿರಲಿಲ್ಲ. ಈಗಿನ ಸರ್ಕಾರ ಇಂಧನ ಬೆಲೆಯನ್ನು ನೂರರ ಗಡಿ ದಾಟಿಸಿದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಹೊರೆಯಾಗಿ ತೆರಿಗೆ ಹಾಕುತ್ತಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರಕ್ಕೆ ದೂರದೃಷ್ಟಿ ಇಲ್ಲ. ಮುಂದಿನ ದಿನಗಳಲ್ಲಿ ಮತದಾರರು ಇವರಿಗೆ ತಕ್ಕ ಪಾಠ ಕಲಿಸಲಿದ್ದು, ಮುಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಬರುವುದು ಶತಸಿದ್ಧ ಎಂದರು.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊದಲೈಮುತ್ತು, ಪಾರಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ, ನಗರಸಭೆ ಸದಸ್ಯರಾದ ರಮೇಶ್‌ಕುಮಾರ್, ಕರುಣಾಕರ, ಇಂದಿರಾಗಾಂಧಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net