

ಶಿವಮೊಗ್ಗ: ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದಿಂದ ಜಿಎಸ್‌ಎಸ್ ಜನ್ಮದಿನದ ನಿಮಿತ್ತ ಜಿಎಸ್‌ಎಸ್ ಪುರಸ್ಕಾರ ಹಾಗೂ ಕಾವ್ಯಸೌರಭ ವಿಶೇಷ ಕಾರ್ಯಕ್ರಮವನ್ನು ಮಾ.3ರಂದು ಸಂಜೆ 6ಕ್ಕೆ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಳೆದ 10 ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು 2024ನೇ ಸಾಲಿನ ಜಿಎಸ್‌ಎಸ್ ಪುರಸ್ಕಾರವನ್ನು ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ಅವರಿಗೆ ನೀಡಿ ಗೌರವಿಸಲಾಗುವುದು. ಮಾಜಿ ಸ್ಪೀಕರ್ ಡಿ.ಎಚ್.ಶಂಕರಮೂರ್ತಿ ಸಮಾರಂಭ ಉದ್ಘಾಟಿಸುವರು ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣಶಾಸ್ತ್ರಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮುಖ್ಯ ಅತಿಥಿಯಾಗಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ಡಯಟ್ ಉಪನ್ಯಾಸಕಿ ಜ್ಯೋತಿಕುಮಾರಿ ಜಿಎಸ್‌ಎಸ್ ಕುರಿತ ಚಿಂತನೆ ನಡೆಸಿಕೊಡುವರು. ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಕಿರಣ್ ದೇಸಾಯಿ ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಸಂಚಾಲಕ ವಿನಯ್ ಶಿವಮೊಗ್ಗ ಅಭಿನಂದನಾ ನುಡಿಗಳನ್ನಾಡುವರು. ಗರ್ತಿಕೆರೆ ರಾಘಣ್ಣ ಅವರ ಪುತ್ರಿಯರಾದ ಸುಮಿತ್ರಾ ಚಿದಂಬರಂ ಮತ್ತು ಶ್ರೀದೇವಿ ಅವರಿಂದ ಗೀತ ಗಾಯನ ಇರಲಿದೆ ಎಂದರು. ಪ್ರತಿಷ್ಠಾನದ ಸಂಚಾಲಕ ವಿನಯ್ ಶಿವಮೊಗ್ಗ, ಟ್ರಸ್ಟಿ ಡಾ. ಎಸ್.ನಾಗಮಣಿ, ಮುರುಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.