ಕಾವ್ಯದ ಹಣತೆಯಿಂದ ನಾಡನ್ನು ಬೆಳಗಿದ ಜಿಎಸ್​ಎಸ್

GSS
Published on

ಜಿ.ಎಸ್. ಶಿವರುದ್ರಪ್ಪನವರು 20ನೇ ಶತಮಾನದ ಪ್ರಮುಖ ಸಾಹಿತ್ಯಿಕ ಚಳವಳಿಗಳಾದ ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯಗಳ ಅತ್ಯುತ್ತಮ ಅಂಶಗಳನ್ನೆಲ್ಲ ಮೈಗೂಡಿಸಿಕೊಂಡು ಬರೆದ ಮಹತ್ವದ ಲೇಖಕ. ಅವರ ಗದ್ಯ ಮತ್ತು ಪದ್ಯಗಳಲ್ಲಿ ನವೋದಯದ ಭಾವುಕತೆ, ಪ್ರಗತಿಶೀಲ ಚಳವಳಿಯ ಸಾಮಾಜಿಕ ಕಳಕಳಿ, ನವ್ಯದ ಆಕೃತಿ ಸೂಕ್ಷ್ಮತೆ ಮತ್ತು ಬಂಡಾಯದ ಪ್ರಗತಿಪರ ಚಿಂತನೆಗಳು ಮೇಳವಿಸಿದ್ದವು. ಕನ್ನಡ ಕಾವ್ಯ ಮತ್ತು ವಿಮರ್ಶೆಯನ್ನು ಬೆಳೆಸಿ ಕಾವ್ಯಮೀಮಾಂಸೆಗೂ ತಮ್ಮದೆ ಆದ ಕೊಡುಗೆ ನೀಡಿ ರಾಷ್ಟ್ರಕವಿಯಾದರು.

ಅಪ್ಪಟ ಜೀವನಪ್ರೀತಿಯ ಮನುಷ್ಯ

| ಎಂ.ಎಸ್. ಆಶಾದೇವಿ

GSS 2
ಜಿ.ಎಸ್. ಶಿವರುದ್ರಪ್ಪ ಅವರು ಕನ್ನಡದ ಕಾವ್ಯಮೀಮಾಂಸೆ ಕಟ್ಟಲು ನಡೆಸಿದ ಪ್ರಯತ್ನ ಬಲುದೊಡ್ಡದು. ಅಲ್ಲದೆ, ಯಾವೆಲ್ಲ ಆಯಾಮಗಳಲ್ಲಿ ಕೆಲಸ ಮಾಡಿದರೆ ಕನ್ನಡ ಭಾಷೆಯನ್ನು ಕಟ್ಟಬಹುದು ಎಂಬುದರ ಸ್ಪಷ್ಟ ಅರಿವಿದ್ದ ಅವರು ಆ ಎಲ್ಲ ಆಯಾಮಗಳಲ್ಲಿ ತುಂಬ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವನ್ನು ಕಟ್ಟಿ, ಅದಕ್ಕೆ ಶಕ್ತಿ ತುಂಬಿದರು. ವಿಚಾರ ಸಂಕಿರಣಗಳು, ಪ್ರಖರವಾದ ವಿಷಯಗಳ ಮೇಲೆ ಗೋಷ್ಠಿಗಳು... ಹೀಗೆ ಕನ್ನಡಕ್ಕಾಗಿ ಏನೆಲ್ಲ ಮಾಡಬಹುದಿತ್ತೋ ಅದನ್ನೆಲ್ಲ ಮಾಡಿದರು. ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಪಥವನ್ನು ಅವರ ಕಾರ್ಯಗಳ ಮೂಲಕವೇ ತೋರಿಸಿಕೊಟ್ಟರು. ಜತೆಯಲ್ಲಿ ಇದ್ದವರನ್ನು ಅಪಾರ ಅಂತಃಕರಣದಿಂದ ಕಾಣುತ್ತಿದ್ದರು. ಅದು ಅವರ ವ್ಯಕ್ತಿತ್ವದ ವಿಶೇಷ.

ಬಡತನ, ಹಸಿವು, ಕ್ರೌರ್ಯಗಳೇ ಜಗತ್ತಿನ ಪ್ರಮುಖ ಸವಾಲುಗಳು ಮತ್ತು ಮನುಷ್ಯನ ಹೋರಾಟ ಇವುಗಳ ವಿರುದ್ಧ ಎಂಬುದನ್ನೇ ತಮ್ಮ ಕಾವ್ಯ ಮುಖೇನ ತಿಳಿಸಿಕೊಟ್ಟರು. ಇಂದಿಗೂ ಜಿಎಸ್​ಎಸ್ ಅವರ ಪ್ರಸಿದ್ಧ ಕವನಗಳು ಮನೆಮನಗಳಲ್ಲಿ ಅನುರಣಿಸುತ್ತಿವೆ. ಆದರೆ, ಈ ಪ್ರಸಿದ್ಧ ಹಾಡುಗಳ ಆಚೆಯೇ ಜಿಎಸ್​ಎಸ್ ಅವರ ನಿಜವಾದ ಕಾವ್ಯವಿದೆ ಎಂಬುದನ್ನು ಮರೆಯಬಾರದು. ‘ಸ್ತ್ರೀ ಅಂದರೆ ಅಷ್ಟೇ ಸಾಕೇ’ ಕವನಕ್ಕಿಂತ ಸ್ತ್ರೀಶಕ್ತಿ ಹೆಚ್ಚು ಪರಿಣಾಮಕಾರಿಯಾಗಿ ಅನಾವರಣಗೊಂಡಿದ್ದು ಅವರ ‘ಅಮೃತ ಮುಹೂರ್ತ’ ಮತ್ತು ‘ದಾಟಿ ಬಾ ನಿರ್ಭಯದ ನಿಲುವಿಗೆ...’ ಕವನಗಳಲ್ಲಿ. ಹಾಗಾಗಿ, ಪ್ರಸಿದ್ಧ ಹಾಡುಗಳ ಆಚೆಗೂ ಅವರ ಕಾವ್ಯವನ್ನು ನೋಡಬೇಕು. ಅರಿಯಬೇಕು.

ನಾನು ಅವರ ನೇರ ವಿದ್ಯಾರ್ಥಿನಿಯಲ್ಲ. ಆದರೂ, ನನ್ನನ್ನು ಶಿಷ್ಯವಾತ್ಸಲ್ಯದಲ್ಲೇ ಸಲುಹಿದರು. ಹಾಗಾಗಿ, ನನ್ನ ಪಾಲಿಗೆ ಜಿಎಸ್​ಎಸ್ ನಿಜವಾದ ಹಣತೆ. ಆ ಬೆಳಕನ್ನು, ಪ್ರೇರಣೆಯನ್ನು ಮರೆಯಲು ಸಾಧ್ಯವೇ ಇಲ್ಲ. ಜೀವನಪ್ರೀತಿ ಎಂದು ಹೇಳುವಾಗ ಅಲ್ಲಿ ಎಲ್ಲ ಸಂಗತಿಗಳು ಒಳಪಡುತ್ತವೆ. ಸಣ್ಣಸಣ್ಣ ಸಂಗತಿಗಳನ್ನು ಅಗಾಧವಾಗಿ ಪ್ರೀತಿಸಿ, ಹೇಗೆ ಬದುಕಬೇಕು ಎಂಬುದನ್ನೂ ತೋರಿಸಿಕೊಟ್ಟರು. ಒಳ್ಳೆಯ ಬಟ್ಟೆ, ರುಚಿಯಾದ ಊಟ ಇಷ್ಟಪಡುತ್ತಿದ್ದ ಅವರನ್ನು ರುಚಿವಂತ ಮನುಷ್ಯ ಎಂದೇ ಹೇಳಬಹುದು. ಅವರ ಓದಿನ ಪ್ರೀತಿಯಂತೂ ಅಗಾಧ. ಇಳಿವಯಸ್ಸಿನಲ್ಲಿ ಕಣ್ಣಿನ ಸಮಸ್ಯೆ ಉಂಟಾದರೂ, ಓದುವುದನ್ನು ನಿಲ್ಲಿಸಲಿಲ್ಲ. ತಮಗೆ ಇಷ್ಟವಾದ ಬರಹ, ಕೃತಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ಇಷ್ಟಿಷ್ಟೇ ಓದಿ, ಬರೆದವರಿಗೂ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಲು ಮರೆಯುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲೇ ಅವರು ನನಗೆ ಹಲವು ಬಾರಿ ಫೋನ್ ಮಾಡಿ ಮಾತನಾಡಿದ್ದುಂಟು.

ಕವಿತ್ವಕ್ಕೆ ಹೊಸ ಶಕ್ತಿಯನ್ನೇ ತುಂಬಿದ ಜಿಎಸ್​ಎಸ್ ಮಂಡಿಸುತ್ತಿದ್ದ ವಿಚಾರಗಳು, ಪ್ರತಿಪಾದಿಸುತ್ತಿದ್ದ ಚಿಂತನೆಗಳು ಅಪಾರ ಸ್ಪಷ್ಟತೆಯಿಂದ ಕೂಡಿರುತ್ತಿದ್ದವು. ಅವರ ವೈಚಾರಿಕ ನಿಲುವಿನಲ್ಲಿ ಗೊಂದಲಕ್ಕೆ ಆಸ್ಪದವಿರಲಿಲ್ಲ. ಕನ್ನಡವನ್ನು ಕಟ್ಟುವ, ಬೆಳೆಸುವ ಕೆಲಸವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

(ಲೇಖಕರು ಹಿರಿಯ ಸಾಹಿತಿ)

ಕವಿತ್ವದ ಶಕ್ತಿ ಅನಾವರಣಗೊಳಿಸಿದರು

| ಪ್ರೊ. ಕೆ.ಮರುಳಸಿದ್ದಪ್ಪ

GSS 1
ಡಾ. ಜಿ.ಎಸ್. ಶಿವರುದ್ರಪ್ಪ ಅವರು ಮುಖ್ಯವಾಗಿ ಲೇಖಕರಾಗಿ ಗಮನ ಸೆಳೆಯುತ್ತಾರೆ. ಅಲ್ಲದೆ, ಅವರು ಎರಡು-ಮೂರು ತಲೆಮಾರಿನ ವಿದ್ಯಾರ್ಥಿಗಳಿಗೆ ಅಧ್ಯಾಪಕರಾಗಿ ಪಾಠ ಮಾಡುವುದರೊಂದಿಗೆ ಅವರನ್ನು ಬೆಳೆಸಿದ್ದಾರೆ. ಜಿಎಸ್​ಎಸ್ ಮೂರು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಹೈದರಾಬಾದ್​ನ ಉಸ್ಮಾನಿಯಾ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ದುಡಿದಿದ್ದಾರೆ. ಹದಿನೈದು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅದನ್ನು ಕಟ್ಟಿದ್ದಾರೆ.

ಡಾ. ಯು.ಆರ್. ಅನಂತ ಮೂರ್ತಿ ಅವರ ಮಾತಿನಲ್ಲಿಯೇ ಹೇಳುವುದಾದರೆ, ಜಿ.ಎಸ್.ಶಿವರುದ್ರಪ್ಪ ಅವರು ನಮ್ಮ ಕಾಲದ ದ್ರೋಣಾಚಾರ್ಯರಾಗಿದ್ದಾರೆ. ಅವರು ಆದರ್ಶಪ್ರಾಯರಾಗಿ ರಾಷ್ಟ್ರಕವಿ ಕುವೆಂಪು ಪರಂಪರೆ ಯನ್ನು ಮುಂದುವರಿಸಿಕೊಂಡು ಬಂದರು. ಕುವೆಂಪು ಅವರಿಗೆ ಅತಿ ಹತ್ತಿರದ ಶಿಷ್ಯರಾಗಿದ್ದರು. ಕುವೆಂಪು ಅವರ ಮಾರ್ಗದರ್ಶನದಲ್ಲಿಯೇ ಶಿವರುದ್ರಪ್ಪ ಅವರು ತಮ್ಮ ಪಿಎಚ್​ಡಿ ಪದವಿ ಪಡೆದಿದ್ದು. ಕುವೆಂಪು ಅವರ ಪ್ರಭಾವ ಜಿಎಸ್​ಎಸ್ ಮೇಲೆ ಸಾಕಷ್ಟು ಇತ್ತು.

ತೀನಂಶ್ರೀ, ಬಿಎಂಶ್ರೀ, ಡಿ.ಎಲ್. ನರಸಿಂಹಾಚಾರ್, ಕುವೆಂಪು ಅವರು ಕನ್ನಡದ ಆಚಾರ್ಯರಾಗಿದ್ದವರು. ಜಿ.ಎಸ್. ಶಿವರುದ್ರಪ್ಪ ಅವರು ಈ ಎಲ್ಲ ಆಚಾರ್ಯರ ಮುಖ್ಯವಾದ ಕೊಂಡಿಯಂತೆ ಕೆಲಸ ಮಾಡಿದವರು. ಜಿ.ಎಸ್. ಶಿವರುದ್ರಪ್ಪ ಅವರು ಕವಿ, ವಿಮರ್ಶಕ, ಬರಹಗಾರ. ಹೀಗೆ ಅವರು ವಿಸ್ತಾರವಾದ ಪ್ರಪಂಚವೆಂದೇ ಗುರುತಿಸಬಹುದು. ಅಷ್ಟರ ಮಟ್ಟಿಗೆ ಅವರು ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ. ಇಂದಿಗೂ ಅವರ ಅನೇಕ ಕವನಗಳು ಕೇಳುಗರ ಗಮನ ಸೆಳೆಯುತ್ತವೆ. ಜನರ ಮನಸ್ಸಿನ ಮೇಲೆ ಅಚ್ಚೊತ್ತಿವೆ. ಅದು ಜಿಎಸ್​ಎಸ್ ಅವರಿಗೆ ಇದ್ದ ಕವಿತ್ವದ ಶಕ್ತಿ.

ಜಿ.ಎಸ್. ಶಿವರುದ್ರಪ್ಪ ಅವರು ಯಾವುದಕ್ಕೂ ಆಸೆ ಪಟ್ಟವರಲ್ಲ. ಸರ್ಕಾರ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿತು. ಆ ಸಂದರ್ಭದಲ್ಲಿ ಬಂದ ಹಣದ ಜತೆಗೆ ಇನ್ನಷ್ಟು ಸೇರಿಸಿ ಠೇವಣಿಯನ್ನಿಟ್ಟು ಅದರ ಬಡ್ಡಿಯಲ್ಲಿ ವಿಮರ್ಶಕರಿಗೆ ಪ್ರಶಸ್ತಿ ನೀಡುವ ಪರಿಪಾಠ ಬೆಳೆಸಿದರು. ಕಳೆದ 25 ವರ್ಷಗಳಿಂದ ಈ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಜಿಎಸ್​ಎಸ್ ಆಶಯದಂತೆ ಸಮಿತಿ ರಚನೆ ಮಾಡಿ ವಿಮರ್ಶಾ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಜಿಎಸ್​ಎಸ್ ಅವರ ಪ್ರಿಯ ಶಿಷ್ಯ ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ ಸತ್ಯನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

ನಾನು ಪಿಯುಸಿಯಿಂದ ಎಂಎ ತನಕ ಅವರ ಶಿಷ್ಯನಾಗಿದ್ದೆ. ನನ್ನ ಪಿಎಚ್​ಡಿಗೂ ಶಿವರುದ್ರಪ್ಪ ಅವರೇ ಮಾರ್ಗದರ್ಶಕರು. ನಾನು ಅಧ್ಯಾಪಕನಾಗಿ ಸೇರಿದ ಮೂರು ವರ್ಷದ ನಂತರ ಜಿಎಸ್​ಎಸ್ ಮೈಸೂರು ವಿಶ್ವವಿದ್ಯಾಲಯದಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದರು. ಆನಂತರ ಅವರೊಂದಿಗೆ ಸಾಕಷ್ಟು ಕಾಲ ಕಳೆದಿರುವ ನನಗೆ ನೂರಾರು ನೆನಪುಗಳಿವೆ. ಅವರ ಮಗಳನ್ನೇ ಮದುವೆಯಾಗಿದ್ದೇನೆ. ನನ್ನ ಜೀವನದ ಮೇಲೆ ಜಿಎಸ್​ಎಸ್ ಅವರ ಪ್ರಭಾವ ಸಾಕಷ್ಟಿದೆ.

(ಲೇಖಕರು ಹಿರಿಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net