ಗೃಹಲಕ್ಷ್ಮೀ ಯೋಜನೆಯ ಅರ್ಜಿ ಹೀಗಿರಲಿದೆ ನೋಡಿ! 2000 ರೂ. ಪಡೆಯಲು ಯಾವ ದಾಖಲೆ ಕೊಡಬೇಕು?

gruhalaxmi
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳ ಕಾಲ ಮನೆ ಒಡತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಜಮೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಮುಂದಿನ ಆಗಸ್ಟ್​ 15ರಿಂದ ಪ್ರತಿ ತಿಂಗಳು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಮನೆ ಒಡತಿಯ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆಯಾಗಲಿದೆ. ಆದರೆ ಫಲಾನುಭವಿಗಳಾಗಲು ಯಾವ್ಯಾವ ದಾಖಲೆ ಸಲ್ಲಿಸಬೇಕು? ಅರ್ಜಿ ಹೇಗಿರಲಿದೆ ಎಂದೆಲ್ಲ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿದ್ದರೆ, ಇಲ್ಲಿ ಉತ್ತರಗಳಿವೆ!

ಅರ್ಜಿ ಸ್ವರೂಪ ಹೀಗಿದೆ:

ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವ ಮೊದಲು ಮನೆ ಯಜಮಾನಿ ಯಾರೆಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಅವರಲ್ಲಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ.

ಅರ್ಜಿಯಲ್ಲಿ ಮೊದಲಿಗೆ ಹೆಸರು, ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿ, ಉದ್ಯೋಗ, ಪತಿಯ ಹೆಸರು, ಪತಿಯ ಆಧಾರ್ ಹಾಗೂ ವೋಟರ್ ಐಡಿ ಮುಂತಾದ ಮಾಹಿತಿಯನ್ನು ಕೇಳಲಾಗಿದೆ. ಅದರೊಂದಿಗೆ ಜಾತಿ, ಆಧಾರ್ ಜತೆ ಲಿಂಕ್ ಆಗಿರುವ ಮೊಬೈಲ್ ನಂ. ಬ್ಯಾಂಕ್ ಖಾತೆ ಮಾಹಿತಿಯನ್ನು ನಮೂದಿಸಲು ಜಾಗ ನೀಡಲಾಗಿದೆ.

ಲಗತ್ತಿಸಬೇಕಾದ ದಾಖಲೆ ಯಾವುವು?

ಈ ಅರ್ಜಿಯನ್ನು ತುಂಬಿ ಜತೆಗೆ, ಮನೆ ಯಜಮಾನಿ ಹಾಗೂ ಆಕೆಯ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ವೋಟರ್ ಐಡಿ ಪ್ರತಿಯನ್ನು ಲಗತ್ತಿಸಬೇಕು. ಅದರೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಲಗತ್ತಿಸಬೇಕು.

ಒದಗಿಸಿದ ಮಾಹಿತಿ ಸುಳ್ಳಾದಲ್ಲಿ ಬಂದ ಹಣ ಮರುಪಾವತಿಸಬೇಕು!

ಕೊನೆಗೆ ಸ್ವಯಂ ಘೋಷಣೆ ಒಂದಕ್ಕೆ ಸಹಿ ಹಾಕಬೇಕಾಗಿದ್ದು, ಅದರಲ್ಲಿ ಮನೆಯೊಡತಿ,

“ನಾನು ಮತ್ತು ನನ್ನ ಪತಿಯು ಅದಾಯ ತೆರಿಗೆ/ ಜಿಎಸ್‌ಟಿ ಪಾವತಿದಾರರಾಗಿರುವುದಿಲ್ಲ. ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳುವಳಿಕೆಯಂತೆ ಸಮರ್ಪಕವಾಗಿದೆ.

ನನ್ನ ಕುಟುಂಬ ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ, ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇವೆ.” ಎಂಬ ಹೇಳಿಕೆಯನ್ನು ಒಪ್ಪಿ ಸಹಿ ಹಾಕಬೇಕಾಗಿರುತ್ತದೆ.

ಇದೇ ಮಾಹಿತಿಯನ್ನು ಆನ್ಲೈನ್ ಮೂಲಕ ಸಲ್ಲಿಸಿಯೂ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಜೂ.15ರಂದು ಲಾಂಚ್ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net