ಬ್ಯಾಂಕ್ ಖಾತೆಗೆ ಬಾರದ ಗೃಹಲಕ್ಷ್ಮೀ..!

gruha lakshmi-1
Published on

ಸದೇಶ್ ಕಾರ್ಮಾಡ್ ಮೈಸೂರು
ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿಗಳ ಖಾತೆಗೆ ಕಳೆದ ಎರಡು ತಿಂಗಳಿನಿಂದ ಹಣ ಜಮೆಯಾಗಿಲ್ಲ. ಹಣ ಜಮೆಯಾಗದ ಹಿನ್ನೆಲೆಯಲ್ಲಿ ಫಲಾನುಭವಿಗಳು ಬ್ಯಾಂಕ್‌ಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಪಂಚ ಗ್ಯಾರಂಟಿ ಯೋಜನೆಗಳು ಪ್ರಮುಖ ಪಾತ್ರ ನಿರ್ವಹಿಸಿತ್ತು. ಅದರಲ್ಲೂ ವಿಶೇಷವಾಗಿ ಪ್ರತಿಯೊಂದು ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮೆ ಮಾಡುವ ‘ಗೃಹಲಕ್ಷ್ಮೀ’ ಯೋಜನೆ ಮಹಿಳೆಯರನ್ನು ಹೆಚ್ಚು ಆಕರ್ಷಿಸಿತ್ತು. ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 2023ರಲ್ಲಿ ಚಾಲನೆ ನೀಡಿದ್ದರು. ಯೋಜನೆ ಒಂದು ವರ್ಷ ಪೂರ್ಣಗೊಳಿಸುವ ಸಂದರ್ಭದಲ್ಲಿಯೇ ಯೋಜನೆಯಡಿ ಹಣ ಪಾವತಿ ಸ್ಥಗಿತಗೊಂಡಿರುವುದು ಫಲಾನುಭವಿಗಳಲ್ಲಿ ಬೇಸರ ಮೂಡಿಸಿದೆ.

ಲೋಕಸಭಾ ಚುನಾವಣೆಯ ನಂತರ ಗೃಹಲಕ್ಷ್ಮೀ ಯೋಜನೆಯಡಿ ಹಣ ಸಂದಾಯವಾಗಿಲ್ಲ. ಹೀಗಾಗಿ ಯೋಜನೆ ಸ್ಥಗಿತಗೊಳ್ಳು ವುದೇ ಅಥವಾ ಮುಂದುವರೆಯುವುದೇ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂದು ವಿರೋಧ ಪಕ್ಷಗಳ ನಾಯಕರು ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿದ್ದರು. ‘ಚುನಾವಣೆಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ರೂಪಿಸಿಲ್ಲ. ಅದು ಬಡವರ ಪರವಾದ ಯೋಜನೆಗಳಾಗಿವೆ. ಈ ಯೋಜನೆಗಳು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಿಸುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಬಾರಿ ಸ್ಪಷ್ಟನೆ ನೀಡಿದ್ದರು. ಆದರೆ, ಲೋಕಸಭಾ ಚುನಾವಣೆ ನಂತರ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಾವತಿ ಆಗಿಯೇ ಇಲ್ಲ. ಇದು ಪ್ರತಿಪಕ್ಷಗಳ ಆರೋಪಗಳಿಗೆ ಪುಷ್ಟಿ ನೀಡಿದಂತಾಗಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ಪಂಚ ಗ್ಯಾರಂಟಿ ಯೋಜನೆಗಳು ವಿಧಾನಸಭೆ ಚುನಾವಣೆಯ ಮಾದರಿಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಪ್ರಭಾವ ಬೀರಲಿದೆ ಎಂದು ಕಾಂಗ್ರೆಸ್ ನಾಯಕರು ನಿರೀಕ್ಷೆ ಮಾಡಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾನಗಳು ದೊರೆಯಲಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳ ಮರು ಪರಿಶೀಲನೆ ಅಗತ್ಯ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿಯೇ ಕೇಳಿ ಬಂತು. ಈ ಎಲ್ಲ ಚರ್ಚೆಗಳಿಗೆ ಪೂರಕವಾಗಿ ಗೃಹಲಕ್ಷ್ಮೀ ಯೋಜನೆಯಡಿ ಎರಡು ತಿಂಗಳಿನಿಂದ ಹಣ ಬಾರದೆ ಇರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ.

ಮಹಿಳೆಯರ ಅಲೆದಾಟ: ಹಣ ಜಮೆಯಾದರೆ ಫಲಾನುಭವಿಗಳ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆದರೆ, ಎರಡು ತಿಂಗಳಿನಿಂದ ಮೆಸೇಜ್ ಬಾರದ ಹಿನ್ನೆಲೆಯಲ್ಲಿ ಫಲಾನುಭವಿಗಳು ಪಾಸ್ ಪುಸ್ತಕ ಹಿಡಿದುಕೊಂಡು ಬ್ಯಾಂಕ್‌ಗೆ ತೆರಳಿ ವಿಚಾರಿಸುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಹಣ ಸಂದಾಯವಾಗಿಲ್ಲ ಎಂಬ ಮಾಹಿತಿ ಬರುತ್ತಿದ್ದು, ಮಹಿಳೆಯರು ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ. ಕೆಲವು ಮಹಿಳೆಯರು, ಗ್ರಾಮ್ ಒನ್, ಕರ್ನಾಟಕ ಒನ್ ಕಚೇರಿಗಳಿಗೂ ತೆರಳಿ ವಿಚಾರಿಸುತ್ತಿದ್ದಾರೆ. ಸರ್ಕಾರದಿಂದ ಪ್ರತಿ ತಿಂಗಳು 2 ಸಾವಿರ ರೂ. ಬರುತ್ತಿದ್ದ ಹಿನ್ನೆಲೆಯಲ್ಲಿ ಹಲವಾರು ಮಹಿಳೆಯರು ಈ ಹಣವನ್ನು ನಂಬಿ ಇಎಂಐ ಆಧಾರದ ಮೇಲೆ ವಿವಿಧ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಕೆಲವರು ಚಿನ್ನದ ಸ್ಕೀಂಗಳ ಮೇಲೆ ಹೂಡಿಕೆ ಮಾಡಿದ್ದರು. ಇನ್ನು ಕೆಲವರು ಬ್ಯಾಂಕ್‌ಗಳು, ಸ್ವ ಸಹಾಯ ಸಂಘಗಳಲ್ಲಿ ಕಿರು ಸಾಲ ಪಡೆದುಕೊಂಡಿದ್ದಾರೆ. ಆದರೆ, ಇದೀಗ ಗೃಹಲಕ್ಷ್ಮೀ ಹಣ ಪಾವತಿಯಾಗದೆ ಇರುವ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳು ಕಂಗಾಲಾಗಿದ್ದು, ಎಲ್ಲಿಂದ ಹಣ ಹೊಂದಿಸಲಿ ಎಂಬ ಆತಂಕ ಅವರಲ್ಲಿ ಮೂಡಿದೆ. ಯೋಜನೆಯಡಿ ಸದ್ಯದಲ್ಲಿಯೇ ಫಲಾನುಭವಿಗಳ ಖಾತೆ ಹಣ ಪಾವತಿಯಾಗಲಿದ್ದು, ಈ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ, ಖಾತೆಗೆ ಹಣ ಪಾವತಿಯಾದರೆ ಮಾತ್ರ ಫಲಾನುಭವಿಗಳು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ. ಸಾಕಷ್ಟು ಫಲಾನುಭವಿಗಳಿಗೆ 2 ಸಾವಿರ ರೂ.ಮೊತ್ತ ಏನೇನು ಅಲ್ಲ. ಆದರೆ, ಕೆಲವು ಫಲಾನುಭವಿಗಳು ಈ ಹಣದ ಮೇಲೆ ಸಾಕಷ್ಟು ಅವಲಂಬಿತರಾಗಿದ್ದಾರೆ.

ಜಿಲ್ಲೆಯಲ್ಲಿ 6.66 ಲಕ್ಷ ಗೃಹಲಕ್ಷ್ಮೀಯರು: ಜಿಲ್ಲೆಯಲ್ಲಿ ಒಟ್ಟು 6,80,950 ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿ ದ್ದರು. ಈ ಪೈಕಿ ಅರ್ಹ 6,66,264 ಮಹಿಳೆಯರನ್ನು ಆಯ್ಕೆ ಮಾಡಿ ಅವರ ಖಾತೆಗೆ ಹಣ ಪಾವತಿ ಮಾಡಲಾಗುತಿದೆ. ಜಿಎಸ್‌ಟಿ ಪಾವತಿಸುವ ಕುಟುಂಬದ ವರು, ಒಂದೇ ಕುಟುಂಬದಲ್ಲಿ ಹಲವು ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಅಂತಹ ಮಹಿಳೆಯರ ಅರ್ಜಿಗಳನ್ನು ಪರಿಶೀಲಿಸಿ ತಿರಸ್ಕರಿಸಲಾ ಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಜೂನ್ ಹಾಗೂ ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಈ ಹಿಂದೆ ಜಿಲ್ಲಾ ಮಟ್ಟದಿಂದಲೇ ಹಣ ಪಾವತಿ ಮಾಡುವ ವ್ಯವಸ್ಥೆ ಇತ್ತು. ಇದೀಗ ರಾಜ್ಯಮಟ್ಟದಲ್ಲಿ ಪಾವತಿ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಕೆಲವೊಂದು ತಿಂಗಳು ಹಣ ಪಾವತಿಯಲ್ಲಿ ವಿಳಬವಾಗುತ್ತಿದೆ. ಈಗಾಗಲೇ ಜೂನ್ ತಿಂಗಳ ಹಣ ಪಾವತಿಗೆ ಕ್ರಮ ವಹಿಸಲಾಗಿದ್ದು, ಒಂದು ವಾರದೊಳಗೆ ಎಲ್ಲ ಫಲಾನುಭವಿಗಳ ಖಾತೆ ಹಣ ಜಮೆಯಾಗುವ ನಿರೀಕ್ಷೆ ಇದೆ. ಈ ವಿಚಾರದಲ್ಲಿ ಫಲಾನುಭವಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ
ಎಚ್.ಆರ್. ಸುರೇಶ್,
ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net