

ಬೆಂಗಳೂರು ಕೆಲವು ವರ್ಷಗಳ ಜೈನ ಸಮುದಾಯದವರು ಕತ್ತಲಾಗುವ ಮೊದಲೇ ರಾತ್ರಿ ಊಟವನ್ನು ಮುಗಿಸುವ ಸಂಪ್ರದಾಯವನ್ನು ಟೀಕಿಸುತ್ತಿದ್ದರು. ವೈಜ್ಞಾನಿಕವಾಗಿರುವ ಈ ನಿಯಮವೇ ಇಂದು ಜಾಗತಿಕವಾಗಿ ಆಚರಣೆಯಾಗುತ್ತಿದೆ ಎಂದು ಇಸ್ರೋ ಟೆಲಿಮೆಟ್ರಿ ಡಾಟಾ ಅಕ್ವಿಸಿಷನ್ ಸಿಸ್ಟಂ ಮುಖ್ಯಸ್ಥೆ ಅನುರಾಧಾ ಬಿ ದೇಸಾಯಿ ತಿಳಿಸಿದರು.
ಪಂಡಿತರತ್ನ ಎ ಶಾಂತಿರಾಜಶಾಸಿ ಟ್ರಸ್ಟ್ ಜೈನ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ರಸ್ಟ್‌ನ 36ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ‘ಆದರ್ಶ ಜೈನ ಮಹಿಳಾ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಜೈನ ಸಮುದಾಯದ ಆಹಾರ ಪದ್ಧತಿ ಬಗ್ಗೆ ಕೆಲವರು ಹಲವು ರೀತಿಯಲ್ಲಿ ಮಾತನಾಡುತ್ತಿದ್ದರು. ಆದರೆ, ಈ ನಿಯಮವು ವೈಜ್ಞಾನಿಕವಾಗಿ ಇರುವುದರಿಂದಲೇ ವಿಶ್ವದಾದ್ಯಂತ ಪ್ರಚಾರ ಮತ್ತು ಪಾಲನೆಯಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಜೀವಿಸು ಮತ್ತು ಇತರರನ್ನು ಜೀವಿಸಲು ಬಿಡು ಎಂಬ ನಿಯಮ ಕೂಡ ಇಂದು ಅಗತ್ಯವಾಗಿದೆ. ದೇಶದಲ್ಲಿ ಕೇವಲ ಶೇ.04ರಷ್ಟಿರುವ ಜೈನ ಸಮುದಾಯವು ದೇಶದ ಶೇ.24ರಷ್ಟು ತೆರಿಗೆ ಪಾವತಿಸುತ್ತಾರೆ ಎಂಬುದು ಖುಷಿಯ ವಿಚಾರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ,ನಕಾರಾತ್ಮಕ ಮನಸ್ಥಿತಿ ಜನರೇ ಹೆಚ್ಚಿರುವ ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಮನೆಗಳಲ್ಲಿ ಸಂಸ್ಕೃತಿಯನ್ನು ತಿಳಿಸಿಕೊಡುವವರು ಸಕಾರಾತ್ಮಕ ಮನೋಭಾವ ಹೊಂದಿರುತ್ತಾರೆ ಎಂದರು.
ಮಕ್ಕಳಿಗೆ ಊಟ ಮಾಡಲು, ನಿದ್ದೆ ಮಾಡಲು ಮೊಬೈಲ್ ಕೊಡುತ್ತಿದ್ದೇವೆ. ಪರಿಣಾಮ, ಮೊಬೈಲ್ ಗೆಡ್ಜೆಟ್‌ಗಳಲ್ಲಿಯೇ ಮುಳುಗಿರುವ ಇಂದಿನ ತಲೆಮಾರು ಎಲ್ಲವನ್ನೂ ಗೂಗಲ್‌ನಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದಿನ ತಲೆಮಾರಿನವರಿಗೆ ಏನೂ ಗೊತ್ತಿಲ್ಲವೆಂದು ಭಾವಿಸುತ್ತಿರುವುದು ಬಹುದೊಡ್ಡ ಅಪಾಯಕಾರಿ ಸಂಗತಿ ಎಂದು ತಿಳಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ದೇಸಾಯಿ, ಟ್ರಸ್ಟ್ ಅಧ್ಯಕ್ಷ ಎಸ್. ಜಿತೇಂದ್ರಕುಮಾರ್ ಮತ್ತು ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿ ಹಲವರು ಉಪಸ್ಥಿತರಿದ್ದರು.