

ಕಾಡುಹಾದಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸೈಕ್ಲಿಸ್ಟ್ಗಳ ಒಂದೊಳ್ಳೆ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತುಂಬ ಮೆಚ್ಚುಗೆ ಗಳಿಸಿದೆ.
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಎಂಬುವರು ಪೋಸ್ಟ್ ಮಾಡಿದ 27 ಸೆಕೆಂಡ್ಗಳ ವಿಡಿಯೋದಲ್ಲಿ ಈ ಸೈಕ್ಲಿಸ್ಟ್ಗಳು ಚಿಗರೆಯನ್ನು ರಕ್ಷಿಸಿದ್ದನ್ನು ನೋಡಬಹದು.
ಯಾವ ಪ್ರದೇಶದಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ಇದು ತುಂಬ ಜನರಿಗೆ ಮಾದರಿಯಾಗುವಂತಹ ವಿಡಿಯೋ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡದಾದ ಚಿಗರೆಯೊಂದು ಕೆಸರುಮಣ್ಣುಗಳು ತುಂಬಿದ ಕಂದಕದಲ್ಲಿ ಬಿದ್ದು, ಎದ್ದು ಬರಲಾಗದೆ ಒದ್ದಾಡುತ್ತಿತ್ತು. ಅದೇ ದಾರಿಯಲ್ಲಿ ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ಸೈಕ್ಲಿಸ್ಟ್ಗಳು, ತಮ್ಮ ಸೈಕಲ್ಗಳನ್ನು ನಿಲ್ಲಿಸಿ ಕಂದಕದಿಂದ ಮೂಕಪ್ರಾಣಿಯನ್ನು ಎತ್ತಿದ್ದಾರೆ. ಅದು ಮಣ್ಣಿನ ಹೊಂಡದಿಂದ ಬರುತ್ತಲೇ ಒಂದು ಕ್ಷಣವೂ ನಿಲ್ಲದೆ ಓಡಿ ಹೋಗಿದೆ.
ವಿಡಿಯೋ ಪೋಸ್ಟ್ ಮಾಡಿದ ಐಎಫ್ಎಸ್ ಅಧಿಕಾರಿ, ಬಲಿಷ್ಠ ಜನರು ಇತರರು ಕೆಳಗೇ ಇರಲು ಬಿಡುವುದಿಲ್ಲ. ಅವರನ್ನೂ ಮೇಲೆತ್ತುತ್ತಾರೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ವಿಡಿಯೋ ಫೆ.19ರಂದು ಸಂಜೆ ಪೋಸ್ಟ್ ಆಗುತ್ತಿದ್ದಂತೆ ಸಿಕ್ಕಾಪಟೆ ವೈರಲ್ ಆಗಿದೆ. ಈಗಾಲೇ 4000ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
ಪ್ರತಿಫಲವನ್ನು ಅಪೇಕ್ಷಿಸದೆ ಸಹಾಯಕ್ಕೆ ಇಳಿಯುವುದು ಎಂದರೆ ಇದು, ಸೈಕ್ಲಿಸ್ಟ್ಗಳು ತುಂಬ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೊಗಳುತ್ತಿದ್ದಾರೆ. (ಏಜೆನ್ಸೀಸ್)