

ವಿಜಯಪುರ: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆ ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸುವ ಮೂಲಕ ವಿಜಯಪುರ ನಗರ ವಿಧಾನ ಸಭೆ ಕ್ಷೇತ್ರ ಮಾದರಿಯಾಗಿದೆ.
ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು-ಚೇಳು ಕಡಿತ ಸೇರಿದಂತೆ ಮತ್ತಿತರ ಅವಘಡಗಳಿಂದ ಮೃತಪಟ್ಟರೆ ಅಥವಾ ಅಂಗವಿಕಲರಾದರೆ ಇಲ್ಲವೇ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರಬೇಕಾದರೆ ನೆರವಾಗಲೆಂದು ಇಂಥದ್ದೊಂದು ಯೋಜನೆ ರೂಪಿಸಲಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಧ್ಯಕ್ಷತೆಯಲ್ಲಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಇಂಥದ್ದೊಂದು ಸೌಲಭ್ಯ ಕಲ್ಪಿಸಲಾಗಿದೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಮೊದಲ ಹಂತದಲ್ಲಿ 15279 ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸಿ ಪ್ರಮಾಣ ಪತ್ರ ವಿತರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈ ವಿಮೆ ಸೌಲಭ್ಯದಿಂದ ಬಡ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ. ಮೃತ ಮಕ್ಕಳ ಪಾಲಕರಿಗೆ ರೂ.2 ಲಕ್ಷ ಪರಿಹಾರ ಹಾಗೂ ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ರೂ. 1ಲಕ್ಷ ಪರಿಹಾರ ಸಿಗಲಿದೆ ಎಂದರು.
ವಿಜಯಪುರ ನಗರ ಮತಕ್ಷೇತ್ರದಲ್ಲಿ ಬರುವ 128 ಪ್ರಾಥಮಿಕ ಶಾಲೆಗಳು ಹಾಗೂ 7 ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 15,279 ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸಿ, ಪ್ರಮಾಣ ಪತ್ರ ವಿತರಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆ ನವದೆಹಲಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಸಹ ವಿತರಿಸಲಾಗಿದ್ದು ಇದರ ಸದುಪಯೋಗ ಪಡೆಯಬೇಕೆಂದು ಶಾಸಕರು ಹೇಳಿದರು.
ಸುರಕ್ಷತೆ ಎನ್ನುವುದು ಎಲ್ಲದಕ್ಕೂ ಇದೆ, ಅವರಿಗೆ ವಿಮೆ ಮಾಡಬೇಕೆಂದು ಯೋಚಿಸಿ, ನಗರ ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಮಾತ್ರ ವಿಮೆಗೆ ಒಳಪಡಿಸಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಮನವಿ ಮೇರೆಗೆ ನಗರದಲ್ಲಿ ಬರುವ (ನಾಗಠಾಣ ಮತಕ್ಷೇತ್ರವೂ ಒಳಗೊಂಡಂತೆ) ಎಲ್ಲ ಅನುದಾನಿತ, ಅನುದಾನ ರಹಿತ ಶಾಲೆಗಳ ಮಕ್ಕಳಿಗೂ ಸಹ ಈ ಗುಂಪು ಯೋಜನೆಯಡಿ ಒಳಪಡಿಸುವುದಾಗಿ ಘೋಷಿಸಿದರು.
ವಿಮೆ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಹಾಗೂ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ಹಾಗೂ ಎಲ್ಲ ತಾಲ್ಲೂಕುಗಳಿಗೆ ಪ್ರಥಮ ಸ್ಥಾನ ಪಡೆಯುವ ಮಕ್ಕಳಿಗೆ ಲ್ಯಾಪ್‌ಟಾಪ್ ಬಹುಮಾನವಾಗಿ ನೀಡಲಾಗುವುದು ಎಂದರು.
ಶಾಸಕ ವಿಠಲ ಕಟಕದೊಂಡ, ಎಎಸ್‌ಪಿ ಶಂಕರ ಮಾರಿಹಾಳ, ಎಡಿಸಿ ಸೋಮನಿಂಗ ಗೆಣ್ಣೂರ, ಬಿಇಒ ಬಸವರಾಜ ತಳವಾರ ಮಾತನಾಡಿ, ಯೋಜನೆ ಕುರಿತು ಶ್ಲಾಘಿಸಿದರು. ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ರವೀಂದ್ರ ರತ್ನಾಕರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಪಟ್ಟಣಶೆಟ್ಟಿ ಮತ್ತಿತರರಿದ್ದರು.