

ರೋಣ: ಅಟಲ್ ಭೂಜಲ ಯೋಜನೆಯಡಿ ಧಾರವಾಡದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ತಾಲೂಕಿನ ರೈತರಿಗೆ ಪಟ್ಟಣದ ಸಾಹಿತ್ಯ ಭವನದಲ್ಲಿ ಗುರುವಾರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳ್ಳಿಮಠ ಮಾತನಾಡಿ, ಅತಿಯಾದ ನೀರಿನ ಬಳಕೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಜಲಕ್ಷಾಮ ಉಂಟಾಗುತ್ತಿರುವ ಪರಿಸ್ಥಿತಿಯಲ್ಲಿ ಅಂತರ್ಜಲ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಪ್ರಮಾಣ ಕಡಿಮೆಯಾಗದಂತೆ ವಿವಿಧ ಕ್ರಮಗಳ ಮೂಲಕ ದಕ್ಷತೆಯಿಂದ ಬಳಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ರೋಣ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲ ಸುಸ್ಥಿರವಾಗಿ ನಿರ್ವಹಣೆ ಮಾಡಬೇಕು. ಕೃಷಿಯಲ್ಲಿ ನೀರಿನ ಮಿತ ಬಳಕೆಗೆ ಉಪಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯುವ ಜತೆಗೆ ಕೊಳವೆ ಬಾವಿಗಳಿಗೆ ಮರುಪೂರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಅಟಲ್ ಭೂಜಲ ಯೋಜನೆಯ ಅಧಿಕಾರಿ ಕೊಟ್ರೇಶ, ಜಲತಜ್ಞ ಪ್ರಕಾಶ, ಎಂ.ಎಂ. ಕರಿಬಸಜ್ಜ, ಧಾರವಾಡದ ಕೃಷಿ ವಿಜ್ಞಾನಿಗಳಾದ ಬಸವರಾಜ ಏಣಗಿ, ಉಪ ಕೃಷಿ ನಿರ್ದೇಶಕ ಪಾಲಾಕ್ಷಗೌಡ, ನೊಡಲ್ ಅಧಿಕಾರಿಗಳಾದ ಮುರಳೀಧರ ಪಾಟೀಲ ಇತರರು ಇದ್ದರು.