

ಶಿವಮೊಗ್ಗ: ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸಮಾಜಮುಖಿ ಕಾರ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಇಸ್ಲಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ನಿರ್ಮಾಣಕ್ಕೆ ಜೂ.5ರ ಬೆಳಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಇದು 2.25 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, ಎರಡು ಹಂತದಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ 40 ಚದರದ ಕಟ್ಟಡ ನಿರ್ಮಾಣವಾಗಲಿದೆ. ಇದಕ್ಕೆ ಜನಪ್ರತಿನಿಧಿಗಳ ಅನುದಾನ ಬಳಸಿಕೊಳ್ಳಲಾಗುವುದು ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಆರ್.ಅಚ್ಯುತ ರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆ.ಬಿ.ಪ್ರಸನ್ನಕುಮಾರ್ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಜಾಗವನ್ನು ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ದೊರೆಯುವಂತೆ ಶ್ರಮಿಸಿದ್ದರು. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್ ಭಾಗವಹಿಸುವರು ಎಂದು ಹೇಳಿದರು.
ಸಂಘವು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿ ಆರ್ಥಿಕ ಸಹಾಯ ಮಾಡುತ್ತಿದೆ. ಸುವರ್ಣ ದಾಂಪತ್ಯ ಸನ್ಮಾನ, ವಾರ್ಷಿಕ ಉಪನ್ಯಾಸ ಸಪ್ತಾಹ, ಹೆಸರಾಂತ ಗಾಯಕರಿಂದ ಸಂಗೀತ ಸಂಜೆ ಮೊದಲಾದ ಕಾರ್ಯಕ್ರಮ ನಡೆಸಲಾಗುತ್ತಿದೆ. ಉತ್ತರ-ದಕ್ಷಿಣ ವಧು-ವರರ ವೈವಾಹಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘವು ಶ್ರಮಿಸುತ್ತಿದೆ. ವಧು-ವರರ, ವಿಪ್ರ ಜಾಗೃತಿ ಸಮಾವೇಶ, ಯುವ ಪೀಳಿಗೆಯನ್ನು ಸಮಾಜದತ್ತ ಸೆಳೆಯುವ ಉದ್ದೇಶದಿಂದ ಗಾಯತ್ರಿ ಮಾತಾ ಕ್ರಿಕೆಟ್ ಪಂದ್ಯಾವಳಿ ಸಂಘಟಿಸುವ ಮೂಲಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಕ್ರಿಯವಾಗಿದೆ ಎಂದರು.
ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ, ಪ್ರಮುಖರಾದ ಕೆ.ಎನ್.ವಿಶ್ವನಾಥ್, ರವಿಕುಮಾರ್, ಛಾಯಾಪತಿ, ನಾಗೇಶ, ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.