ನೆಲಕಚ್ಚಿದ ರಾಗಿ, ಉದುರಿದ ಅವರೆ ಹೂವು; ಮಳೆಗೆ ಮಣ್ಣುಪಾಲಾಯ್ತು ಬೆಳೆ; ನಷ್ಟಪರಿಹಾರದ ಮಾತೆತ್ತದ ಕೃಷಿ ಇಲಾಖೆ; ಆತಂಕದಲ್ಲಿ ಅನ್ನದಾತ

ಕೋಲಾರ ತಾಲೂಕು ಯಲವಾರದಲ್ಲಿ ಹೊಲದಲ್ಲಿ ನೆಲಕಚ್ಚಿದ ರಾಗಿ
ಕೋಲಾರ ತಾಲೂಕು ಯಲವಾರದಲ್ಲಿ ಹೊಲದಲ್ಲಿ ನೆಲಕಚ್ಚಿದ ರಾಗಿ
Published on

ಕೋಲಾರ: ಜಿಲ್ಲೆಯಲ್ಲಿ ತಡವಾಗಿ ಬಿತ್ತನೆಯಾಗಿದ್ದ ರಾಗಿ "ಮಾಂಡೌಸ್​' ಅಬ್ಬರಕ್ಕೆ ನೆಲಕ್ಕುರುಳಿದೆ. ಅವರೆ ಹೂವು ತರಗೆಲೆಗಳಂತೆ ಉದುರಿ ರೈತರು ಲಕ್ಷಾಂತರ ರೂ.ನಷ್ಟ ಅನುಭವಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 64,950 ಹೆಕ್ಟೇರ್​ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ, ಜುಲೈ ಮತ್ತು ಆಗಸ್ಟ್​ನಲ್ಲಿ ಎಡೆಬಿಡದೆ ಮಳೆ ಸುರಿದ ಪರಿಣಾಮ 58,139 ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಲಾಗಿತ್ತು. ಸಾಮಾನ್ಯವಾಗಿ ರಾಗಿ ತೆನೆ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಕಟಾವಿಗೆ ಬರಲಿದ್ದು, ಪ್ರಸ್ತುತ ಶೇ.70 ಮಾತ್ರ ಕಟಾವು ಮಾಡಲಾಗಿದೆ. ಇನ್ನೂ ಕೆಲವು ಕಡೆ ಕಾಳು ಕಟ್ಟುತ್ತಿರುವುದು, ಕೂಲಿಯವರ ಸಮಸ್ಯೆ ಸೇರಿ ಹಲವು ಕಾರಣಗಳಿಂದ ಶೇ.30 ಫಸಲು ಹೊಲಗಳಲ್ಲಿ ಇದ್ದು, ಶನಿವಾರ ದಿನವಿಡೀ ಬಿರುಗಾಳಿ ಸಮೇತ ಸುರಿದ ಮಳೆಗೆ ತೆನೆಗಳು ನೆಲಕ್ಕುರುಳಿವೆ. ಮಳೆ ಮತ್ತೆ ಮುಂದುವರಿದಿರುವುದರಿಂದ ತೆನೆಗಳು ಮೊಳಕೆಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

15 ಸಾವಿರ ಹೆಕ್ಟೇರ್​ ರಾಗಿ ಫಸಲು ನಾಶ: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 66.5 ಸಾವಿರ ಹೆಕ್ಟೇರ್​ನಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ಡಿಸೆಂಬರ್​ನಲ್ಲಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಬೆಳೆ ನೆಲಕಚ್ಚಿ ರೈತರು ಲಕ್ಷಾಂತರ ರೂ.ನಷ್ಟ ಹೊಂದಿದ್ದರು. ಈ ಬಾರಿ ರಾಗಿ ಸಹವಾಸವೇ ಬೇಡವೆಂದು ರಾಗಿ ಬಿತ್ತನೆಗೆ ರೈತರು ಹಿಂದೆ ಮುಂದೆ ನೋಡಿ ತಡವಾಗಿ ಭೂಮಿಗೆ ಕಾಳು ಹಾಕಿದ್ದರು. ಆದರೆ ಈ ಬಾರಿಯೂ ಎಡೆಬಿಡದೆ ವರ್ಷಧಾರೆಯಾಗಿದ್ದು, ಕಟಾವು ಮಾಡಬೇಕಿದ್ದ ಸುಮಾರು 15 ಸಾವಿರ ಹೆಕ್ಟೇರ್​ ರಾಗಿ ಫಸಲು ಧಾರಾಶಾಹಿಯಾಗಿದೆ.

ಜಿಲ್ಲೆಯ ಪ್ರಮುಖ ಆಹಾರ ಧಾನ್ಯ ರಾಗಿಯಾಗಿದ್ದು, ಸತತ ಮೂರು ವರ್ಷದಿಂದ ರೈತರು ಬೆಳೆ ನಷ್ಟ ಹೊಂದುತ್ತಿದ್ದಾರೆ. ಕಳೆದ ವರ್ಷ ನಷ್ಟ ಪರಿಹಾರ ನೀಡಲಾಗಿತ್ತಾದರೂ, ಈ ಬಾರಿ ಒಂದೇ ದಿನ ದಾಖಲೆ ಮಳೆ ಸುರಿದಿರುವುದರಿಂದ ಸರ್ಕಾರ ಪ್ರಕೃತಿ ವಿಕೋಪವೆಂದು ಪರಿಗಣಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ ಎಂಬುದು ಕೃಷಿತಜ್ಞರ ಅಭಿಪ್ರಾಯವಾಗಿದೆ.

ಅವರೆಗೆ ಹೊಡೆತ: ಶ್ರೀನಿವಾಸಪುರ ಸೇರಿದಂತೆ ಹಲವೆಡೆ ರಾಗಿಹೊಲಗಳು ಮತ್ತು ಮಾವಿನ ತೋಟಗಳಲ್ಲಿ ಪ್ರತ್ಯೇಕವಾಗಿ 6,019 ಹೆಕ್ಟೇರ್​ನಲ್ಲಿ ಅವರೆ ಬೆಳೆಯಲಾಗಿದೆ. ಡಿಸೆಂಬರ್​ ಅಂತ್ಯಕ್ಕೆ ಹಾಗೂ ಜನವರಿಯಲ್ಲಿ ರಾಜ್ಯದ ವಿವಿಧೆಡೆ ಲೋಡುಗಟ್ಟಲೆ ಈ ಅವರೆಕಾಯಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಶೀತ, ಮಳೆ, ಗಾಳಿಗೆ ಅವರೆ ಗಿಡಗಳಲ್ಲಿ ಯಥೇಚ್ಛವಾಗಿದ್ದ ಹೂವು ನೆಲಕ್ಕೆ ಉದುರಿವೆ. ಇದರಿಂದಾಗಿ ಈ ಬಾರಿ ರುಚಿಕರವಾದ ಸೊಗಡಿನ ಅವರೆಕಾಯಿ ಸರಬರಾಜು ಕುಂಠಿತಗೊಳ್ಳುವುದು ನಿಶ್ಚಿತವಾದಂತಾಗಿದೆ.

ಶ್ರೀನಿವಾಸಪುರ ತಾಲೂಕು ನೀಲಟೂರಿನ ರೈತ ನರಸಿಂಹರೆಡ್ಡಿ ಬೆಳೆದಿರುವ ಅವರೆ ಬೆಳೆ

ಜಿಲ್ಲೆಯಲ್ಲಿ ರಾಗಿ ಹೊರತುಪಡಿಸಿದರೆ ಖುಷ್ಕಿಯಲ್ಲಿ ಅವರೆ ಪ್ರಮುಖ ಬೆಳೆಯಾಗಿದೆ. ಶ್ರೀನಿವಾಸಪುರ ಮತ್ತು ಇತರ ಕಡೆ ಇರುವ ಮಾವಿನ ತೋಟಗಳಲ್ಲಿ ಭೂಮಿ ಫಲವತ್ತತೆಯಿಂದ ಕೂಡಿರಲೆಂದು ರೈತರು ಮಧ್ಯದಲ್ಲಿ ಅವರೆ ಬೆಳೆಯುತ್ತಾರೆ. ಕೋಲಾರದ ನೆಲದಲ್ಲಿ ಬೆಳೆಯುವ ಅವರೆಕಾಯಿಗೆ ಬೆಂಗಳೂರು, ಚೆನ್ನೈ, ತಿರುಪತಿ ಮತ್ತಿತರ ಕಡೆ ಬೇಡಿಕೆ ಇದೆ. ರೈತರು ದೂರದ ಮಾರುಕಟ್ಟೆಗಳಿಗೆ ಅವರೆಕಾಯಿ ಸಾಗಿಸಿ ಕೈತುಂಬಾ ಕಾಸು ನೋಡುತ್ತಿದ್ದರು. ಆದರೆ ಮಳೆಹೊಡೆತಕ್ಕೆ ಹೂಗಳೆಲ್ಲ ಉದುರಿಹೋಗಿದ್ದು, ರೈತರು ಕಂಗಾಲಾಗಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಅವರೆ ಕಾಯಿ 90ರಿಂದ 100ರೂ.ಇದ್ದು, ಮಾವಿನ ತೋಟಗಳಿಂದ ಅವರೆ ಕಾಯಿ ಬಂದರೆ ಅದರಲ್ಲಿ ಅರ್ಧದಷ್ಟು ಬೆಲೆಗೆ ಉತ್ಪನ್ನ ಗ್ರಾಹಕರಿಗೆ ಸಿಗುತ್ತಿತ್ತು. ಆದರೆ ಗಿಡಗಳಲ್ಲಿ ಹೂವಿಲ್ಲದ ಪರಿಣಾಮ ಬೆಲೆ ಇಳಿಕೆ ಮರೀಚಿಕೆಯಾಗಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ.

ಅವರೆಕಾಯಿಗೆ ಬೇಡಿಕೆ ಹೆಚ್ಚು: ಸೊಗಡಿನಿಂದ ಕೂಡಿದ ಹಸಿ ಅವರೆ ಇಸುಕಿದ ಕಾಳಿನ ಸಾರು ರಾಗಿ ಮುದ್ದೆ ಊಟ ಮಾಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಬೇಕರಿಗಳಲ್ಲಿ ಸಿಹಿ, ಕಾರದ ತಿನಿಸುಗಳಲ್ಲೂ ಅವರೆಯ ಇಸುಕಿದ ಬೇಳೆ ಬಳಸಲಾಗುತ್ತಿದೆ. ನೀರಾವರಿ ಮತ್ತು ಗದ್ದೆಗಳಲ್ಲಿ ಬೆಳೆಯುವ ಅವರೆಗಿಂತ ಬೆಟ್ಟ&ಗುಡ್ಡಗಳಿಂದ ಕೂಡಿದ ಕೋಲಾರ ಭಾಗದಲ್ಲಿ ಹೊಲಗಳಲ್ಲಿನ ಅವರೆ ಕಾಯಿ ಬಲು ರುಚಿಕರ. ಹೀಗಾಗಿ ಎಲ್ಲೆಡೆ ಈ ಭಾಗದ ಅವರೆಕಾಯಿಗೆ ಬೇಡಿಕೆ ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net