

Wedding: ಮದುವೆ ಮಂಟಪದಲ್ಲಿ ವಧುವಿನ ಹಣೆಯ ಮೇಲೆ ಸಿಂಧೂರ ಹಚ್ಚುವಾಗ ವರನ ಕೈ ನಡುಗಿದ್ದಕ್ಕಾಗಿ ಮದುವೆಯೇ ನಿಂತ ಘಟನೆ ಬಿಹಾರದಲ್ಲಿ ನಡೆದಿದೆ.
ಮದುವೆಯಲ್ಲಿ ನಡೆದ ಸಣ್ಣ ಘಟನೆಯಿಂದ ವಧುವಿನೊಬ್ಬಳು ಮದುವೆಯನ್ನು ರದ್ದುಗೊಳಿಸಿದ ವಿಚಿತ್ರ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿ ವರನು ವಧುವಿನ ಮನೆಗೆ ಅದ್ಧೂರಿ ವಿವಾಹ ಮೆರವಣಿಗೆಯೊಂದಿಗೆ ಆಗಮಿಸಿದನು ಮತ್ತು ಎಲ್ಲಾ ಆಚರಣೆಗಳು ಸುಗಮವಾಗಿ ನೆರವೇರಿತ್ತು.
ಆದರೆ ವರನು ವಧುವಿನ ಹಣೆಗೆ ಕುಂಕುಮ ಹಚ್ಚುವ ಸಮಯದಲ್ಲಿ ಆತನ ಕೈ ನಡುಗಿದ್ದಕ್ಕಾಗಿ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ. ಜೊತೆಗೆ ಈ ಹುಡುಗ ಹುಚ್ಚ, ಈತನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿ ಮದುವೆಯನ್ನು ನಿಲ್ಲಿಸಿದ್ದಾಳೆ.
ವರ ಮತ್ತು ಅವನ ಕುಟುಂಬದವರು ಮದುವೆಗೆ ಅವಳನ್ನು ಮನವೊಲಿಸಲು ಪ್ರಯತ್ನಿಸಿದರು, ಆದರೆ, ಅವಳು ತನ್ನ ನಿರ್ಧಾರದಲ್ಲಿ ದೃಢವಾಗಿ ನಿಂತು ವರನನ್ನು ಮದುವೆಯಾಗಲು ನಿರಾಕರಿಸಿದಳು.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಅವರು ಎರಡೂ ಕುಟುಂಬಗಳನ್ನು ಪೊಲೀಸ್ ಠಾಣೆಗೆ ಬರಲು ಕೇಳಿಕೊಂಡರು. ದೀರ್ಘ ಚರ್ಚೆಗಳ ನಂತರವೂ ಯಾವುದೇ ಒಪ್ಪಂದಕ್ಕೆ ಬರಲಿಲ್ಲ. ಮದುವೆ ರದ್ದಾದ ನಂತರ, ವಧುವಿನ ಕುಟುಂಬವು ವರದಕ್ಷಿಣೆ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ.
"ವಧು ಮದುವೆಯಾಗಲು ನಿರಾಕರಿಸಿದ ನಂತರ ಎರಡೂ ಕಡೆಯವರು ಠಾಣೆಗೆ ಬಂದರು. ನಾವು ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿದೆವು, ಆದರೆ ವಧುವಿನ ಕುಟುಂಬ ಒಪ್ಪಲಿಲ್ಲ. ಎರಡೂ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)