

ಲಖನೌ: ಮದುವೆ ಮಂಟಪದಲ್ಲಿ ವಧುವಿಗೆ ಹಾರ ಬದಲಾಯಿಸುವ ಮುನ್ನ ವರದಕ್ಷಿಣೆ ಬೇಡಿಕೆ ಇಡುವ ಮೂಲಕ ವರನೊಬ್ಬ ಸಮಸ್ಯೆಯ ಸುಳಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ.
ಮಂಟಪದಲ್ಲೇ ವರ, ವರದಕ್ಷಿಣೆ ಬೇಡಿಕೆ ಇಟ್ಟಿದ್ದನ್ನು ಕೇಳಿ ಶಾಕ್ ಆದ ವಧುವಿನ ಕಡೆಯವರು, ತೀವ್ರ ಆಕ್ರೋಶ ವ್ಯಕ್ತಪಡಿಸಿ, ವರ ಮತ್ತು ಆತನ ಸಂಬಂಧಿಕರನ್ನು ಒತ್ತೆಯಾಳಾಗಿರಿಸಿಕೊಂಡರು. ವರನನ್ನು ಮರಕ್ಕೆ ಕಟ್ಟಿಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವರನನ್ನು ಅಮರಜಿತ್ ವರ್ಮ ಎಂದು ಗುರುತಿಸಲಾಗಿದೆ. ಈತ ಜೌನ್ಪುರದ ಸಕ್ರಾ ಗ್ರಾಮದ ನಿವಾಸಿ. ವರನ ಕಡೆಯವರು ಪಾನಮತ್ತ ಸ್ಥಿತಿಯಲ್ಲಿದ್ದರು ಮತ್ತು ವಧುವಿನ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆಕ್ರೋಶಗೊಂಡ ವಧುವಿನ ಕುಟುಂಬ ಮರಕ್ಕೆ ಕಟ್ಟಿರುವ ವರನನ್ನು ನಿಂದಿಸುತ್ತಿರುವ ದೃಶ್ಯವಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಧು-ವರನ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಇಬ್ಬರ ನಡುವೆ ಸಂಧಾನ ಆಗಲೇ ಇಲ್ಲ.
ಸದ್ಯ ಮದುವೆ ಮುಂದೂಡಲಾಗಿದ್ದು, ಇಬ್ಬರ ನಡುವೆ ಮಾತುಕತೆ ಮುಗಿದ ಬಳಿಕ ಮತ್ತೆ ಮದುವೆ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)