ಮದುವೆಗೆ ಮುನ್ನ ಕಣ್ಮರೆಯಾದ ವರ; ಆತನನ್ನು ಒತ್ತೆಯಾಳಾಗಿ ಇರಿಸಿಕೊಂಡು ವಧುವಿನ ಕುಟುಂಬ ಮಾಡಿದ್ದೇನು ಗೊತ್ತಾ?

Groom
Published on

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ವೈರಲ್​ ಆಗುವ ಮುನ್ನ ಜನರ ಗಮನ ಸೆಳೆಯುತ್ತಿವೆ. ಕ್ಷುಲಕ ಕಾರಣಗಳಿಗೆ ಇತ್ತೀಚಿನ ದಿನಗಳಲ್ಲಿ ಮದುವೆಗಳು ನಿಲ್ಲುತ್ತಿದ್ದು, ಉತ್ತರಪ್ರದೇಶದಲ್ಲಿ ಹೆಚ್ಚು ಎಂದರೆ ತಪ್ಪಾಗಲಾರದು. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದಿದ್ದು, ವರನನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಘಟನೆ ನಡೆದಿದೆ.

ಘಟನೆಯ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅಮೇಥಿಯ ನಿವಾಸಿಯಾದ ಲಾಲ್​ ಬಹದ್ದೂರ್​ ಯಾದವ್ ಅವರ ಪುತ್ರಿಯೊಂದಿಗೆ ಅಯೋಧ್ಯೆಯ ನಿವಾಸಿ ಸೋಹನ್​ಲಾಲ್​ ಯಾದವ್​ ಅವರೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಮದುವೆಗೆ ಕೆಲ ದಿನಗಳ ಮೊದಲು ಸೋಹನ್​ಲಾಲ್​ ನಾಪತ್ತೆಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವರನ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಚಾರ ತಿಳಿಯದ ವಧುವಿನ ಕುಟುಂಬಸ್ಥರು ಮದುವೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು.

Food

ಇದಾದ ಬಳಿಕ ಮದುವೆಯ ದಿನ ವಧುವಿನ ಕುಟುಂಬಸ್ಥರಿಗೆ ಈ ಬಗ್ಗೆ ತಿಳಿದಿದ್ದು, ಅವರು ವರ ಹಾಗೂ ಆತನ ಸಂಬಂಧಿಕರನ್ನು ಉಪಚರಿಸಿದ ಬಳಿಕ ಮದುವೆಯನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಆತನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದ್ದು, ನಾವು ನಮ್ಮ ಮಗಳನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಬಳಿಕ ಮದುವೆಗಾಗಿ ಖರ್ಚು ಮಾಡಿರುವ ಹಣವನ್ನು ಕೊಟ್ಟು ವರನನ್ನು ಬಿಡಿಸಿಕೊಂಡು ಹೋಗುವಂತೆ ಹುಡುಗನ ಮನೆಯವರಿಗೆ ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಉಭಯ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆ ರದ್ದಾದ ಬಗ್ಗೆ ಮಾತನಾಡಿರುವ ವರ ಸೋಹನ್​ಲಾಲ್​, ನಾವು ತಡವಾಗಿ ಬಂದೆವು ಎಂಬ ಕಾರಣಕ್ಕೆ ಅವರು ಮದುವೆ ಕ್ಯಾನ್ಸಲ್​ ಮಾಡಿದ್ದಾರೆ. ಅವರು ನನ್ನನ್ನು ಒತ್ತೆಯಾಳಾಗಿ ಇರಿಸಿಕೊಂಡು ಮದುವೆಗೆ ಖರ್ಚು ಮಾಡಿದ ಹಣವನ್ನು ವಾಪಸ್​ ಕೊಡುವಂತೆ ಹೇಳುತ್ತಿದ್ದಾರೆ. ಅವರು ಆರೋಪಿಸಿದ ಪ್ರಕಾರ ನಾನು ಕಾಣೆಯಾಗಿರಲಿಲ್ಲ. ಕೆಲಸದ ನಿಮಿತ್ತ ಲಖನೌಗೆ ಹೋಗಿದ್ದೆ. ಫೋನ್​ ಕೆಟ್ಟು ಹೋಯ್ತು. ಆ ಬಳಿಕ ಊರಿಗೆ ಬಂದೆ. ಕಾರ್ಯಕ್ರಮ ಶುರುವಾದ ಮೇಲೆ ಮದುವೆ ಕ್ಯಾನ್ಸಲ್​ ಎಂದು ಹೇಳುತ್ತಿದ್ದಾರೆ. ನನಗೆ ಏನು ಅರ್ಥವಾಗುತ್ತಿಲ್ಲ ಎಂದು ವರ ಸೋಹನ್​ಲಾಲ್​ ಹೇಳಿದ್ದಾರೆ.

Invitation

ವಧುವಿನ ತಂದೆ ಲಾಲ್​ ಬಹದ್ದೂರ್​ ಯಾದವ್​ ಮಾತನಾಡಿ, ತಿಲಕ್​ ಸಮಾರಂಭದ ಬಳಿಕ ಆತ ಕಣ್ಮರೆಯಾಗಿದ್ದ. ಆ ಬಳಿಕ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ. ಯಾಕೆ ಎಂದು ಕೇಳಿದಾಗ ಕಾರನ್ನು ಕೊಡಿಸಿ ಎಂದು ಹೇಳಿದ. ಆ ಬಳಿಕ ಕಾರ್​ ಬೇಡ ಹಣ ಕೊಡಿ ಎಂದು ಹೇಳಿದ. ಅವನ ಷರತ್ತಿಗೆ ನಾವು ಒಪ್ಪಿಗೆ ಸೂಚಿಸಿ ತಯಾರಿ ಆರಂಭಿಸಿದ್ವಿ. ಆ ಬಳಿಕ ಮದುವೆಯ ದಿನ ಆತ ಬರಲೇ ಇಲ್ಲ. ಸಂಬಂಧಿಕರೆಲ್ಲರೂ ಊಟ ಮಾಡಿಕೊಂಡು ಮನೆಗೆ ಹೊರಟು ಆತ ನಾಪತ್ತೆಯಾಗಿದ್ದ. ಆ ಬಳಿಕ ನಮ್ಮ ಸಂಬಂಧಿಕರೊಬ್ಬರು ಕರೆ ಮಾಡಿ ಪೊಲೀಸ್​ ಠಾಣೆಗೆ ಸೂಚಿಸಿದ್ರು. ಆ ಬಳಿಕ ಆತನನ್ನು ಠಾಣೆಯಿಂದ ಕರೆದುಕೊಂಡು ಮದುವೆ ಮೆನೆಗೆ ಬಂದೆವು.

ಆತ ಬೇರೊಂದು ಮಹಿಳೆಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದು, ನಮಗೆ ತಡವಾಗಿ ತಿಳಿಯಿತು. ಮೊದಲೇ ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದರೆ ನಾವು ಮದುವೆಗೆ ತಯಾರಿ ನಡೆಸುತ್ತಿರಲಿಲ್ಲ. ಮದುವೆಗೆ ಮೊದಲೇ ಇಷ್ಟು ಸುಳ್ಳು ಹೇಳುವವನು ಮುಂದಿನ ದಿನಗಳನ್ನು ನೆನೆಸಿಕೊಂಡು ನಮಗೆ ಭಯವಾಯಿತು. ಈ ಕಾರಣಕ್ಕಾಗಿ ನಾವು ಮದುವೆಯನ್ನು ರದ್ದು ಮಾಡಿ ಆತನ ಕುಟುಂಬಸ್ಥರಿಗೆ ಖರ್ಚಾಗಿರುವ ಹಣವನ್ನು ನೀಡಿ ವರನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದೇವೆ. ಹಣ ಕೊಡುವವರೆಗು ಆತನನ್ನು ಬಿಡುವುದಿಲ್ಲ ಎಂದು ವಧುವಿನ ತಂದೆ ಲಾಲ್​ಬಹದ್ದೂರ್​ ಯಾದವ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net