

ಇಂದೋರ್: ಮದುವೆಯಾಗಿ ಹೊಸ ಜೀವನಕ್ಕೆ ಕಾಲಿರಿಸುವ ಸಂಭ್ರಮದಲ್ಲಿ ಆತ ಸಂಬಂಧಕರೊಂದಿಗೆ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ. ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ, ಮಾಸ್ಕ್ ಹಾಕಿಕೊಳ್ಳುವುದನ್ನು ಮರೆತಿದ್ದ. ಈ ಹಿನ್ನೆಲೆಯಲ್ಲಿ ಆ ವಾಹನವನ್ನು ತಡೆದ ಮಧ್ಯಪ್ರದೇಶದ ಇಂದೋರ್ನ ಮಹಾನಗರ ಪಾಲಿಕೆ ಅಧಿಕಾರಿಗಳು ವರನಿಗೆ 2,100 ರೂಪಾಯಿ ದಂಡ ವಿಧಿಸಿದರು.
ಧಮೇಂಧ್ರ ನಿರಾಲೆ ಜುಲ್ಮಾನೆ ಪಾವತಿಸಿದ ವರ. ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಪ್ರಯಾಣಿಸುವಾಗ ಜನರು ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಪರಿಶೀಲಿಸುತ್ತಿದ್ದೆವು. ಆಗ ಒಂದೇ ವಾಹನದಲ್ಲಿ 11 ಜನರ ಜತೆ ಧಮೇಂದ್ರ ಪ್ರಯಾಣಿಸುತ್ತಿದ್ದದ್ದು ಕಂಡುಬಂದಿತು.
ಜತೆಗೆ ಅವರು ಮಾಸ್ಕ್ ಅನ್ನೂ ಧರಿಸಿರಲಿಲ್ಲ. ದೈಹಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ. ಆದರೆ, ಮದುವೆ ಕಾರ್ಯಕ್ರಮಕ್ಕಾಗಿ ಅಗತ್ಯ ಅನುಮತಿ ಪಡೆದುಕೊಂಡಿದ್ದರು. ಆ ಪ್ರಮಾಣಪತ್ರ ಅವರ ಬಳಿಯಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ 1,100 ರೂ. ಹಾಗೂ ಮಾಸ್ಕ್ ಧರಿಸದೇ ಇರುವುದಕ್ಕೆ 1 ಸಾವಿರ ರೂ. ಸೇರಿ ಒಟ್ಟು 2,100 ರೂ. ಜುಲ್ಮಾನೆ ವಿಧಿಸಲಾಯಿತು ಎಂದು ಇಂದೋರ್ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ವಿವೇಕ್ ಗಂಗ್ರಾದೆ ತಿಳಿಸಿದ್ದಾರೆ.
vijayavani.net/hand-cuffed-beaten-with-rods-and-wooden-sticks/