

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಗೆ (Marriage) ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ಸೌಂಡ್ ಮಾಡುತ್ತಿರುತ್ತವೆ. ಕ್ಷುಲಕ ಕಾರಣಕ್ಕೆ ಮದುವೆಗಳು ಮುರಿದು ಬೀಳುತ್ತಿದ್ದು, ನಮ್ಮ ಸಮಾಜ ಯಾವ ಕಡೆ ವಾಲುತ್ತಿದೆ ಎಂವುದೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇದೀಗ ವರನೋರ್ವ ಹಿಂದಿಯ ಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ವಧುವಿನ ತಂದೆ ಮದುವೆಯನ್ನು ರದ್ದು ಮಾಡಿರುವ ಘಟನೆ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಘಟನೆಯು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದ್ದು, ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ವರ ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಿದ್ದಕ್ಕೆ ವಧುವಿನ ತಂದೆ ಮದುವೆಯನ್ನು (Marriage) ರದ್ದುಪಡಿಸಿದ್ದು, ವರ ಹಾಗೂ ಆತನ ಕುಟುಂಬಸ್ಥರು ಪರಿಸ್ಥಿತಿಯನ್ನು ಅರ್ಥ ಮಾಡಿಸಿ ಎಷ್ಟೇ ಮನವಿ ಮಾಡಿಕೊಂಡರು ವಧುವಿನ ತಂದೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ವರ ಮೆರವಣಿಗೆ ಮೂಲಕ ಮದುವೆಮಂಟಪಕ್ಕೆ ಆಗಮಿಸಿದನು. ಶಾಸ್ತ್ರ ಹಾಗೂ ಆಚರಣೆಗಳು ನಡೆಯುತ್ತಿರುವಾಗ ಆತನ ಸ್ನೇಹಿತರು ಡ್ಯಾನ್ಸ್ ಮಾಡಲು ಕರೆದಿದ್ದಾರೆ. ಅದರಂತೆ ಬಂದ ವರ ಹಿಂದಿಯ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಇದನ್ನು ನೋಡಿದ ವಧುವಿನ ತಂದೆ ಕೂಡಲೇ ಮದುವೆಯನ್ನು ನಿಲ್ಲಿಸುವಂತೆ ಗಲಾಟೆ ಮಾಡಿದ್ದು, ಯಾರು ಎಷ್ಟೇ ಹೇಳಿದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಅಚಲವಾಗಿದ್ದರು. ವರನ ವರ್ತನೆಯು ತಮ್ಮ ಕುಟುಂಬಕ್ಕೆ ವಿರುದ್ಧವಾಗಿದ್ದು, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಅವಮಾನಿಸಿದೆ ಎಂದು ಹೇಳಿ ವರನ ಕುಟುಂಬದವರನ್ನು ಮದುವೆಮನೆಯಿಂದ ಆಚೆ ಕಳುಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಇತ್ತ ಈ ಘಟನೆ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ವಧುವಿನ ತಂದೆಯ ನಡೆಗೆ ಕಿಡಿಕಾರಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ 304.5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಅನೇಕರು ವಧುವಿನ ತಂದೆ ವಿರುದ್ಧ ಕಿಡಿಕಾರಿದ್ದಾರೆ.