

ಬೆಂಗಳೂರು: ಗೃಹಲಕ್ಷ್ಮಿ ನೋಂದಣಿ ವಿಚಾರದಲ್ಲಿ ಗ್ರಾಮ ಪಂಚಾಯತಿಗಳಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಜತೆಗೆ ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಹಿಂಪಡೆದು ದರ ಪರಿಷ್ಕರಣೆ ಮಾಡಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಲಾಗುವ ಪ್ರತಿ ಅರ್ಜಿಯ ನೋಂದಣಿಗೆ 10 ರೂ. ಮತ್ತು ಮಂಜೂರಾತಿ ಪತ್ರವನ್ನು ಮುದ್ರಿಸಲು ಪ್ರತಿ ಮಂಜೂರಾತಿ ಪತ್ರಕ್ಕೆ 2 ರೂ. ಗಳಂತೆ ಶುಲ್ಕವನ್ನು ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡುವ ಕುರಿತು ಸರ್ಕಾರ ಪರಿಷ್ಕೃತ ಆದೇಶ ಪ್ರಕಟಿಸಿದೆ.
ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಲು ಪ್ರತಿ ಅರ್ಜಿಗೆ 20 ರೂ.ನಂತೆ ಅರ್ಜಿ ಶುಲ್ಕವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗ್ರಾಮ ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಈ ಹಿಂದೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು.
ಆ ಸಮಯದಲ್ಲಿ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಪ್ರತಿ ಅರ್ಜಿ ನೋಂದಣಿಗೆ 15 ರೂ. ಮತ್ತು ಮಂಜೂರಾತಿ ಪತ್ರದ ಪ್ರತಿಗೆ 5 ರೂ. ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಬಾಪೂಜಿ ಸೇವಾ ಕೇಂದ್ರಕ್ಕೂ ಶುಲ್ಕ ಪಾವತಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಪ್ರತಿ ಅರ್ಜಿ ನೋಂದಣಿಗೆ 10 ರೂ. ಹಾಗೂ ಮಂಜೂರಾತಿ ಪತ್ರದ ಪ್ರತಿಗೆ 2 ರೂ. ಎಂದು ನಿಗದಿಪಡಿಸಿರುವುದರಿಂದ ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆ ಹಿಂಪಡೆಯಲಾಗಿದೆ.