

ಯಲ್ಲಾಪುರ: ವಿಧಾನಪರಿಷತ್ ಚುನಾವಣೆ ನಂತರ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಬಲಗೊಳಿಸುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಯತ್ನಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನಸ್ವರಾಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ನನ್ನನ್ನೇ ಅಭ್ಯರ್ಥಿ ಎಂದು ತಿಳಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕೋವಿಡ್ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗದಂತೆ ಕಾರ್ಯನಿರ್ವಹಿಸಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಇನ್ನೂ 25 ವರ್ಷಗಳು ಕಳೆದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ದಯನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದರು. ಜಿಪಂ, ತಾಪಂ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಸಂಘಟನಾ ಕಾರ್ಯ ನಡೆಸಬೇಕು. ಸಂಘಟನೆ ಬಲಗೊಂಡರೆ ಮಾತ್ರ ಎಲ್ಲ ಚುನಾವಣೆಗಳಲ್ಲಿ ಯಶಸ್ಸು ಸಾಧ್ಯ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ರಾಜ್ಯದ ಜನತೆ ತೋರಿಸುತ್ತಿರುವ ಪ್ರೀತಿಗೆ ಋಣಿಯಾಗಿದ್ದೇನೆ ಎಂದರು.
ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗಾರಿ ಬಾರಿಸಿ, ಕಹಳೆ ಊದುವ ಮೂಲಕ ಜನ ಸ್ವರಾಜ್ ಯಾತ್ರೆಗೆ ಚಾಲನೆ ನೀಡಿದರು. ಕೊಪ್ಪಳದೊಂದಿಗಿನ ತಮ್ಮ ಬಾಂಧವ್ಯ ವಿವರಿಸುತ್ತಲೇ ಮಾತಿಗಿಳಿದ ಬೊಮ್ಮಾಯಿ, ಬಿಎಸ್ವೈ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟವೆಂದು ನಾಮಕರಣ ಮಾಡಿದ್ದಾರೆ. ನಾನು ಕಕ ಮಂಡಳಿಗೆ ವಾರ್ಷಿಕ 3,000 ಕೋಟಿ ರೂ. ಅನುದಾನ ನೀಡಲು ವಾಗ್ದಾನ ಮಾಡಿರುವೆ ಎಂದರು. ಅಮೃತ ಯೋಜನೆಯಡಿ ರಾಜ್ಯದ 750 ಗ್ರಾಪಂಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಯೋಜನೆ ಯಶಸ್ವಿಯಾದಲ್ಲಿ ಬರುವ ವರ್ಷ 1,600 ಗ್ರಾಪಂಗಳಿಗೆ ವಿಸ್ತರಣೆಯಾಗಲಿದೆ. ಕಳೆದ 4 ವರ್ಷದಿಂದ ವಸತಿ ಯೋಜನೆ ಸ್ಥಗಿತವಾಗಿದೆ. ಹೀಗಾಗಿ ಗ್ರಾಮೀಣ ಭಾಗಕ್ಕೆ 4 ಲಕ್ಷ ಹಾಗೂ ನಗರ ಪ್ರದೇಶಕ್ಕೆ 5 ಲಕ್ಷ ಮನೆ ಮಂಜೂರು ಮಾಡಿದ್ದು, ಶೀಘ್ರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಗ್ರಾಪಂ ಬಲಪಡಿಸಿದ್ದು ಬಿಜೆಪಿ. ಅತಿಹೆಚ್ಚು ಅನುದಾನ, ಅಧಿಕಾರ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. ಸ್ಥಳೀಯ ಸಂಸ್ಥೆಗಳು ಉಳಿಯಲು, ಅಭಿವೃದ್ಧಿ ಹೊಂದಲು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಎಂದು ಗ್ರಾಪಂ, ನಗರ-ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳಲ್ಲಿ ಸಿಎಂ ಮನವಿ ಮಾಡಿದರು.
ದಾವಣಗೆರೆ: ಕಾಂಗ್ರೆಸ್ ಮುಖಂಡರಿಗೆ ಚುನಾವಣೆಗಳು ಬಂದಾಗ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನೆನಪಾಗುತ್ತಾರೆ. ವಾಸ್ತವದಲ್ಲಿ ಅವರಿಬ್ಬರ ತತ್ವಗಳನ್ನು ಆ ಪಕ್ಷ ಗಾಳಿಗೆ ತೂರಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು. ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೇಲ್ಮನೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಬೇಕಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಸುವ ಚುನಾವಣೆಯಲ್ಲಿ ಈ ಭಾಗದಲ್ಲಿ ಎರಡು ಬಾರಿ ಹಿನ್ನಡೆಯಾಗಿದೆ. ಈ ಸಲ ಗೆಲುವು ನಿಶ್ಚಿತ ಎಂದರು.