ಪೀಣ್ಯ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

peenya
Published on

ಬೆಂಗಳೂರು: ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಜುಲೈ ೨೯ರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಮೂಲಕ ತುಮಕೂರು ರಸ್ತೆಯ ಪೀಣ್ಯ ಪ್ಲೈ ಓವರ್‌ಗೆ ಕಳೆದ ಎರಡೂವರೆ ವರ್ಷದಿಂದ ಹಿಡಿದಿದ್ದ ಗ್ರಹಣಕ್ಕೆ ಮುಕ್ತಿ ಸಿಕ್ಕಂತಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರನ್ವಯ ಜುಲೈ ೨೯ರಿಂದ ಸಂಚಾರಕ್ಕೆ ಮುಕ್ತಗೊಳಿಸಿ ಸಂಚಾರ ಪೊಲೀಸ್ ಆದೇಶಿಸಿದ್ದಾರೆ.
ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಪಾರ್ಲೆಜಿ ್ಯಾಕ್ಟರಿವರೆಗೆ ೫ ಕಿ.ಮೀ ಉದ್ದವಿರುವ ಈ ಮೇಲ್ಸೇತುವೆಯಲ್ಲಿ ೧೨೦ ಪಿಲ್ಲರ್‌ಗಳಿವೆ. ೨೦೨೧ ರ ಡಿಸೆಂಬರ್‌ನಲ್ಲಿ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದ್ದರಿಂದ ಎರಡು ಪಿಲ್ಲರ್‌ಗಳ ನಡುವೆ ಹೊಸದಾಗಿ ತಲಾ ಎರಡರಂತೆ ೨೪೦ ಕೇಬಲ್‌ಗಳನ್ನು ಅಳವಡಿಸಲಾಗಿತ್ತು. ಎರಡನೇ ಹಂತದಲ್ಲಿ ಎರಡು ಪಿಲ್ಲರ್‌ಗಳ ನಡುವೆ ತಲಾ ೧೦ ರಂತೆ ೧೨೦ ಕೇಬಲ್ ಬದಲಾಯಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ ೩೦೦ ಕ್ಕೂ ಹೆಚ್ಚು ಹೊಸ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಎರಡ್ಮೂರು ತಂಡಗಳು ಕೇಬಲ್ ಅಳವಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಕೇಬಲ್ ಅಳವಡಿಕೆಯ ಬಳಿಕ ಸಿಮೆಂಟ್ ಹಾಕಿ ಭದ್ರಪಡಿಸಲಿ ಕಾಲಾವಕಾಶ ಬೇಕಿದೆ. ಹೀಗಾಗಿ ವಾರದಲ್ಲಿ ೬ ದಿನಗಳು ಮಾತ್ರ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ವೇಗದ ಮಿತಿ ೪೦ ಕಿ.ಮೀ ಮಾತ್ರ:
ಮೇಲ್ಸೇತುವೆ ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಮುಂಜಾನೆ ೬ರಿಂದ ಶನಿವಾರ ಮುಂಜಾನೆ ೬ ಗಂಟೆಯವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಜತೆಗೆ ಭಾರಿ ವಾಹನಗಳಿಗೆ ಫ್ಲೈಓವರ್ ಮೇಲೆ ಗರಿಷ್ಠ ವೇಗ ಮಿತಿಯನ್ನು ೪೦ ಕಿ.ಮೀ.ಗೆ ನಿಗದಿಪಡಿಸಲಾಗಿದೆ. ಜತೆಗೆ ಎಡ ಪಥದಲ್ಲಿ ಚಲಿಸುವಂತೆ ಸೂಚಿಸಲಾಗಿದೆ.

೨೦೨೧ ಡಿಸೆಂಬರ್‌ನಿಂದ ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನಗಳನ್ನು ನಿಷೇಧಿಸಲಾಗಿತ್ತು. ಈಗ ಕಾಮಗಾರಿ ಮುಗಿದಿರುವ ಹಿನ್ನೆಲೆಯಲ್ಲಿ ಜು.೨೯ ರಿಂದ ಭಾರಿ ವಾಹನಗಳಿಗೆ ಅನುವು ಮಾಡಿಕೊಡಲಾಗಿದೆ. ಆದರೆ ಎರಡು ಷರತ್ತುಗಳನ್ನು ವಿಧಿಸಲಾಗಿದೆ. ಭಾರಿ ವಾಹನಗಳ ಮಿತಿಯನ್ನು ೪೦ ಕಿ.ಮೀ ಗೆ ನಿಗದಿಪಡಿಸಲಾಗಿದೆ. ಜತೆಗೆ ಪ್ರತಿ ಶುಕ್ರವಾರ ಬೆಳಗ್ಗೆ ೬ ಗಂಟೆಯಿಂದ ಶನಿವಾರ ಬೆಳಗ್ಗೆ ೬ ಗಂಟೆಯವರೆಗೆ ೨೪ ಗಂಟೆಗಳ ಕಾಲ ನಿಷೇಧ ಮಾಡಲಾಗಿದೆ. ಉಳಿದ ೬ ದಿನಗಳ ಕಾಲ ಸಂಚಾರ ಮಾಡಬಹುದಾಗಿದೆ.
ಎಂ.ಎನ್.ಅನುಚೇತ್, ಸಂಚಾರ ವಿಭಾಗದ ಹೆಚ್ಚುವರಿ (ಸಂಚಾರ) ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net