

ಮಡಿಕೇರಿ: ಕೋವಿಡ್ -೧೯ ಎರಡನೇ ಅಲೆ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ವಿಕೆಂಡ್ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ಶನಿವಾರ ಕೊಡಗು ಸಂಪೂರ್ಣ ಸ್ತಬ್ಧವಾಗಿತ್ತು. ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿತ್ತು. ವಾಹನ ಸಂಚಾರ ಸಂಪೂರ್ಣ ನಿಂತಿತ್ತು. ವಿಕೆಂಡ್ ಕರ್ಫ್ಯೂಗೆ ಕೊಡಗಿನ ಜನ ಮನೆಯಲ್ಲಿಯೇ ಉಳಿದು ನಿಯಮ ಪಾಲಿಸಿದರು. ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಎಲ್ಲಾ ಗ್ರಾಮ, ನಗರಗಳು ಸಂಪೂರ್ಣ ಬಂದ್ ಆಗಿರುವುದು ಜನರಲ್ಲಿರುವ ಭಯ ಮತ್ತು ನಿಯಮ ಪಾಲನೆಯನ್ನು ವ್ಯಕ್ತಪಡಿಸಿತು.
ಆಸ್ಪತ್ರೆ, ಮೆಡಿಕಲ್ ಶಾಪ್, ಫಾರ್ಮಸಿ, ಲ್ಯಾಬ್, ಡಯಾಲಿಸಿಸ್ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ನೀಡುವ ಕೇಂದ್ರಗಳು, ಪೆಟ್ರೋಲ್ ಬಂಕ್‌ಗಳನ್ನು ಕಾರ್ಯನಿರ್ವಹಿಸಿತು. ೧೦ ಗಂಟೆಯ ನಂತರ ನಗರದ ದಿನಸಿ, ಬಟ್ಟೆ, ತರಕಾರಿ ಅಂಗಡಿ, ಫ್ಯಾನ್ಸಿ ಸ್ಟೋರ್ ಸೇರಿದಂತೆ ಎಲ್ಲಾ ಉದ್ಯಮಗಳು ಸ್ತಬ್ಧಗೊಂಡಿತ್ತು. ಆ ನಂತರ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್‌ಗಳು ಸೇವೆ ನೀಡಿತು. ಪರಿಣಾಮ ಜನ ಸಂಚಾರ ಕೂಡ ವಿರಳವಾಗಿತ್ತು. ವಾಹನಗಳು ಕೂಡ ಹೆಚ್ಚಾಗಿ ಕಂಡು ಬರಲಿಲ್ಲ.
ಅಗತ್ಯ ವಸ್ತು ಖರೀದಿಗೆ ನಿಗದಿ ಮಾಡಿದ್ದ ಸಮಯ ಮೀರುತ್ತಿದ್ದಂತೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಅನಗತ್ಯ ಸಂಚಾರವನ್ನು ತಡೆದು ಎಚ್ಚರಿಕೆ ನೀಡಿದರು.