

ಶಿವಮೊಗ್ಗ: ಸಂಕ್ರಾಂತಿ ಮುನ್ನಾ ದಿನವಾದ ಸೋಮವಾರ ಜಿಲ್ಲೆಯ ವಿವಿಧೆಡೆ ವರ್ಷದ ಮೊದಲ ಹಬ್ಬಕ್ಕೆ ಸಂಭ್ರಮದ ಸಿದ್ಧತೆ ಮಾಡಿಕೊಳ್ಳಲಾಯಿತು. ಶಿವಮೊಗ್ಗದ ಹೂವಿನ ಮಾರುಕಟ್ಟೆ ಸೇರಿ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಹಬ್ಬಕ್ಕಾಗಿ ಖರೀದಿ ಜೋರಾಗಿತ್ತು.
ಸಂಕ್ರಾಂತಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು, ಸಿದ್ಧಪಡಿಸಿದ ಎಳ್ಳು-ಬೆಲ್ಲದ ಬೆಲೆ ಏರಿಕೆಯಾಗಿತ್ತು. ಮನೆಯಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ಪೊಂಗಲ್, ಹೋಳಿಗೆ, ಪಾಯಸ, ರೊಟ್ಟಿ, ಪಲ್ಯ ವಿವಿಧ ರೀತಿಯ ಅಡುಗೆ ತಯಾರಿಸಲು ನಾಗರಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಬೆಲ್ಲ, ಒಣಕೊಬ್ಬರಿ, ಹುರಿಗಡಲೆ, ಕಡಲೆಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಎಳ್ಳು-ಬೆಲ್ಲ ತಯಾರಿಸಿ ವಿವಿಧ ಬಣ್ಣಗಳ ಸಕ್ಕರೆ ಅಚ್ಚುಗಳೊಂದಿಗೆ ಮಾರಾಟ ಮಾಡಲಾಯಿತು. ನಗರದ ವೀರಶೈವ ಕಲ್ಯಾಣ ಮಂದಿರ ರಸ್ತೆ, ಗೋಪಿ ವೃತ್ತ, ಲಕ್ಷ್ಮೀ ಚಿತ್ರಮಂದಿರ ವೃತ್ತ ಮುಂತಾದೆಡೆ ಸಂಕ್ರಾಂತಿಗೆ ಅಗತ್ಯವಿರುವ ವಸ್ತುಗಳನ್ನು ಸಾರ್ವಜನಿಕರು ಸಂಭ್ರಮದಿಂದ ಖರೀದಿಸಿದರು.
ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿಬಜಾರ್, ದುರ್ಗಿಗುಡಿ, ಸವಳಂಗ ರಸ್ತೆ, ನೆಹರು ರಸ್ತೆಗಳು ಜನಸಂದಣಿ ಎಂದಿಗಿಂತ ಹೆಚ್ಚಾಗಿತ್ತು. ಶಿವಪ್ಪ ನಾಯಕ ಮಾರುಕಟ್ಟೆ ರಸ್ತೆ, ಬಿ.ಎಚ್.ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು. ಜನರು ನೆಹರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದುಬಂದು ವಸ್ತುಗಳ ಖರೀದಿಸಿದರು.