

ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯವಾದ ಮಹಾಪುರುಷರು. ಅವರ ಚಿಂತನೆ, ಆದರ್ಶಗಳನ್ನು ಯುವಜನರು ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.
ಸಿದ್ಧಾರ್ಥನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.
ತತ್ವ, ಸಿದ್ಧಾಂತ ಮತ್ತು ಮೌಲ್ಯದ ನಡುವೆ ನಾವೆಲ್ಲರೂ ಸಾಗಬೇಕು ಎನ್ನುವುದನ್ನು ತಮ್ಮ ಕಾವ್ಯದಲ್ಲಿ ಅರ್ಥಪೂರ್ಣವಾಗಿ ಹೇಳಿದ್ದಾರೆ. 4 ಲಕ್ಷದ 8,200 ಪುಟಗಳ ಎಂಟು ಅಧ್ಯಾಯ ಇರುವ ರಾಮಾಯಣ ಮಹಾಗ್ರಂಥ ಜಗತ್ತಿನಲ್ಲೇ ದೊಡ್ಡ ಗ್ರಂಥವಾಗಿದೆ. ರಾಮಾಯಣ ಪೂಜೆ ಮಾಡುವ ವಸ್ತುವಲ್ಲ. ಅದೊಂದು ಬದುಕಿನ ವಿಕಾಸ ಮತ್ತು ಬದಲಾವಣೆಗೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಬುದ್ಧ, ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತವಾಗಿ ನೋಡಬಾರದು. ಇವರೆಲ್ಲರೂ ಸಮಾಜ ಪರಿವರ್ತನೆಯ ಮಹಾಪುರುಷರಾಗಿದ್ದಾರೆ ಎಂದು ತಿಳಿಸಿದರು.
ಕಳೆದ ವರ್ಷ ವಾಲ್ಮೀಕಿ ಪುತ್ಥಳಿಯನ್ನು ತಾಲೂಕು ಕಚೇರಿ ಎದುರು ನಿರ್ಮಿಸುವಂತೆ ಒತ್ತಡ ಕೇಳಿಬಂದಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅಲ್ಲಿ ಪುತ್ಥಳಿ ಸ್ಥಾಪನೆ ಸಾಧ್ಯವಿಲ್ಲವಾದ್ದರಿಂದ ಬೇರೆ ಜಾಗ ಹುಡುಕಲು ಹೇಳಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಪ್ರಸ್ತಾಪ ಮಾಡಿದ ಜಾಗವನ್ನು ಸಮುದಾಯದವರು ಒಪ್ಪಿಕೊಂಡ ಕಾರಣಕ್ಕಾಗಿ ಪುತ್ಥಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ಥಳಿ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮತ್ತಷ್ಟು ಅನುದಾನ ಬೇಕಾದರೆ ಕೊಡುವ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ಅಪಾರ ಕಾಳಜಿ ಇದೆ. ಪ್ರತಿ ವರ್ಷ ಜಯಂತಿ ಆಚರಣೆ ಮಾಡುವಾಗ ವಾಲ್ಮೀಕಿ ಪ್ರತಿಮೆ ವಿಚಾರ ಪ್ರಸ್ತಾಪಗೊಂಡು ಸಮುದಾಯದವರು ಬೇಸರವಾಗುತ್ತಿದ್ದರು. ಈಗ ಅದರ ಕೊರತೆಯನ್ನು ನೀಗಿಸಿದ್ದೇವೆ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ನಗರದ ಕ್ಯಾತಮಾರನಹಳ್ಳಿ ಬಡಾವಣೆಯ ಹುಲಿಯಮ್ಮ ದೇವಸ್ಥಾನ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡುವ ಮೂಲಕ ನಾಯಕ ಸಮಾಜದ ಬಹುದಿನಗಳ ಕನಸನ್ನು ನನಸು ಮಾಡಲಾಗಿದೆ. ರಾಜಕಾರಣ ಮತ್ತು ಅಧಿಕಾರ ಶಾಶ್ವತವಲ್ಲ. ಜನರ ಮನಸ್ಸಿನಲ್ಲಿ ದೀರ್ಘಕಾಲದಲ್ಲಿ ಉಳಿಯುವ ಕೆಲಸ ಮಾಡಬೇಕು ಎಂದರು.
ನಾಯಕ ಸಮುದಾಯದವರು ಅತಿ ಹೆಚ್ಚು ನಮ್ಮ ಕ್ಷೇತ್ರದಲ್ಲಿ ಇದ್ದಾರೆ. ಹುಲಿಯಮ್ಮನ ದೇವಸ್ಥಾನ ಟ್ರಸ್ಟ್ ಹಿಂದೆ 22 ಎಕರೆ ಜಮೀನು ಹೊಂದಿತ್ತು. ಈಗ ಎರಡೂವರೆ ಎಕರೆ ಸಹ ಹೊಂದಿಲ್ಲ. ಖಾತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಎರಡು ಎಕರೆ ಭೂಮಿಯಲ್ಲಿ ಸದ್ಯ ಒಂದು ಸಮುದಾಯ ಭವನ ನಿರ್ಮಾಣದ ಕನಸನ್ನು ಇಟ್ಟುಕೊಳ್ಳಲಾಗಿದೆ. ಯೋಜನೆಯನ್ನು ಹಾಕಿಕೊಂಡಾಗ ನಾವು ಏನಾದರೂ ಕೊಡುಗೆಗಳನ್ನು ನೀಡಲು ಸಾಧ್ಯ. ಸಾಮಾಜಿಕ ಬದ್ಧತೆಯಿಂದ ತೆಗೆದುಕೊಂಡ ಕೆಲಸಗಳನ್ನು ಪೂರ್ಣ ಮಾಡಬೇಕು ಎಂದು ತಿಳಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಅನಿಲ್ ಚಿಕ್ಕಮಾದು, ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಮಲ್ಲೇಶ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಕರ್ನಾಟಕ ರಾಜ್ಯ ನಾಯಕ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ.ಕಾಟೂರ್, ಮಾಜಿ ಉಪ ಮೇಯರ್ ಶಾಂತಕುಮಾರಿ ಇತರರು ಇದ್ದರು.