ಮೆಲಾನಿಯಾ ಟ್ರಂಪ್​ ಅವರು ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಿರುವುದು ನಮಗೆಲ್ಲರಿಗೂ ಸಂತೋಷ: ಅರವಿಂದ್ ಕೇಜ್ರಿವಾಲ್​ ಟ್ವೀಟ್​

Melania Trump 25 Feb 20
Published on

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಅರವಿಂದ್ ಕೇಜ್ರಿವಾಲ್​ ಪ್ರಾರಂಭ ಮಾಡಿರುವ ಹ್ಯಾಪಿನೆಸ್​ ಕ್ಲಾಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೆಲಾನಿಯಾ ಟ್ರಂಪ್​ ಅವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಅವರು ಇಂದು ನಮ್ಮ ಶಾಲೆಯಲ್ಲಿ ಹ್ಯಾಪಿನೆಸ್​ ಕ್ಲಾಸ್​ನಲ್ಲಿ ಭಾಗವಹಿಸಲಿದ್ದಾರೆ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ದೆಹಲಿಯ ಜನರ ಪಾಲಿಗೆ ಅದ್ಭುತವಾದ ದಿನ. ಶತಮಾನಗಳಿಂದಲೂ ಭಾರತ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಕಲಿಸುತ್ತಿದೆ. ಈಗ ಹ್ಯಾಪಿನೆಸ್​ ಕ್ಲಾಸ್​ನಲ್ಲಿ ಭಾಗವಹಿಸುತ್ತಿರುವ ಮೆಲಾನಿಯಾ ಅವರು ನಮ್ಮ ಶಾಲೆಗಳಿಂದಲೂ ಅದೇ ಸಂತೋಷವನ್ನು ಪಡೆಯುತ್ತಿರುವ ಬಗ್ಗೆ ನನಗೆ ಖುಷಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೆಲಾನಿಯಾ ಟ್ರಂಪ್​ ಅವರು ಇಂದು ನಾನಕ್​ಪುರದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಅವರು ಮಕ್ಕಳೊಂದಿಗೆ ಸಂವಾದ ನಡೆಸುವರು. ಹ್ಯಾಪಿನೆಸ್​ ಕ್ಲಾಸ್​ನ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಇದಕ್ಕಾಗಿ ಶಾಲೆಯಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ.

ಮೆಲಾನಿಯಾ ಟ್ರಂಪ್​ ಅವರು ದೆಹಲಿ ಶಾಲೆಗೆ ಭೇಟಿ ನೀಡುವ ಸಮಾರಂಭಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರ ಸರ್ಕಾರ ಆಮಂತ್ರ ನೀಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವಾಗಿ ಆಪ್​ ಮುಖಂಡರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net