ಮಧ್ಯಪ್ರದೇಶದಲ್ಲಿ ಮಿಡತೆ ದಂಡಯಾತ್ರೆ

Midate 24 May 20
Published on

ಭೋಪಾಲ್: ಕರೊನಾ ಹಾವಳಿಯಿಂದ ತತ್ತರಿಸಿರುವ ಮಧ್ಯಪ್ರದೇಶದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಿಡತೆಗಳ ಕಾಟ ಸಂಕಷ್ಟ ತಂದಿದೆ. ಲಕ್ಷೋಪಲಕ್ಷ ಸಂಖ್ಯೆ ಮಿಡತೆಗಳು ಹೊಲಗಳ ಮೇಲೆ ದಾಳಿ ನಡೆಸಿ ಬೆಳೆ ತಿಂದು ಹಾಕುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಇದು ರಾಜ್ಯದಲ್ಲಿ ಕಳೆದ 27 ವರ್ಷಗಳ ಕಾಲಾವಧಿಯಲ್ಲಿ ಮಿಡತೆಗಳು ಮಾಡಿದ ದೊಡ್ಡ ಅನಾಹುತವಾಗಿದೆ.

ರಾಜಸ್ಥಾನದಲ್ಲಿ ಬೆಳೆಗಳನ್ನು ಆಪೋಶನ ತೆಗೆದುಕೊಂಡ ಈ ಮರುಭೂಮಿಯ ಮಿಡತೆಗಳು ಮಧ್ಯಪ್ರದೇಶ ಪ್ರವೇಶಿಸಿವೆ. ಮೊದಲು ನೀಮಚ್ ಜಿಲ್ಲೆ ಮೇಲೆ ದಾಂಗುಡಿ ಇಟ್ಟ ಮಿಡತೆಗಳು ಅಲ್ಲಿಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ರ ಕ್ಷೇತ್ರ ಸೀಹೋರ್ ಜಿಲ್ಲೆಯ ಬುಧನಿ ಬಳಿಕ ಮಾಲ್ವಾ ನಿಮಾಡ್, ಈಗ ರಾಜಧಾನಿ ಭೋಪಾಲ್​ನ ಆಸುಪಾಸಿನ ಹೊಲಗಳಿಗೆ ನುಗ್ಗಿ ಬೆಳೆ ತಿಂದುಹಾಕುತ್ತಿವೆ.

ಪಹರೆ, ಶಬ್ದಕ್ಕೆ ಇಲಾಖೆ ಸಲಹೆ

ರೈತರು ಜಮೀನುಗಳಲ್ಲಿ ಪಹರೆ ಕಾಯುವ ಜತೆಗೆ ನಗಾರಿ, ಡ್ರಮ್ಳನ್ನು ಬಡಿಯುವ ಅಥವಾ ಜೋರು ದನಿ ಮಾಡುವ ಯಾವುದೇ ಸಾಧನ ಉಪಯೋಗಿಸಿ ಮಿಡತೆ ಓಡಿಸುವಂತೆ ಮಧ್ಯಪ್ರದೇಶದ ಕೃಷಿ ಇಲಾಖೆ ಸಲಹೆ ನೀಡಿದೆ. ಮಿಡತೆಗಳು ಸಾಮಾನ್ಯವಾಗಿ ಸಂಜೆ 7ರಿಂದ 9ರವರೆಗೆ ಪಯಣ ಮಾಡದೆ ಬೆಳೆಗಳನ್ನು ತಿನ್ನುತ್ತವೆ. ಆದ್ದರಿಂದ ರೈತರು ಎಚ್ಚರಿಕೆಯಿಂದ ಬೆಳೆ ರಕ್ಷಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಚೀನಾದಲ್ಲಿದೆ ಡಕ್ ಆರ್ವಿು

ಪಾಕಿಸ್ತಾನದಲ್ಲಿ ಮಿಡತೆ ಹಾವಳಿ ತಾರಕಕ್ಕೇರಿದಾಗ ಚೀನಾ ನೆರವಿಗೆ ಮುಂದಾಗಿತ್ತು. ಚೀನಾದಲ್ಲಿ ಮಿಡತೆ ಹಾವಳಿ ತಡೆಗೆ ಬಾತುಕೋಳಿಗಳನ್ನು ಬಳಸಲಾಗುತ್ತದೆ. ಹೀಗಾಗಿ 10 ಸಾವಿರ ಬಾತುಕೋಳಿಗಳನ್ನು ಕಳುಹಿಸುವುದಾಗಿ ಚೀನಾ ಭರವಸೆ ನೀಡಿತ್ತು. ಆದರೆ ಪಾಕಿಸ್ತಾನದಲ್ಲಿ ನೀರಿನ ಕೊರತೆ ಹಾಗೂ ಉಷ್ಣಾಂಶ ಹೆಚ್ಚಿರುವುದರಿಂದ ಈ ಪ್ರಸ್ತಾಪವನ್ನು ಚೀನಾ ಕೈಬಿಟ್ಟಿತ್ತು.

ಪಂಜಾಬ್​ನಿಂದ ಪಾಕಿಸ್ತಾನದವರೆಗೆ

ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಮಧ್ಯಭಾರತದ ರಾಜ್ಯಗಳಲ್ಲಿ ಮಿಡತೆ ಹಾವಳಿ ಸಾಮಾನ್ಯ. ಇವು ಸುಂಟರಗಾಳಿಯಂತೆ ನುಗ್ಗಿ ನೂರಾರು ಎಕರೆಗಳ ಬೆಳೆಯನ್ನು ಬರಿದುಮಾಡಿ ಮರೆಯಾಗುತ್ತವೆ.

ಒಂದೇ ದಿನದಲ್ಲಿ 35 ಸಾವಿರ ಜನರಿಗೆ ಪೂರೈಸಬಹುದಾದಷ್ಟು ಬೆಳೆ ತಿಂದುಹಾಕುತ್ತವೆ. ಆಫ್ರಿಕಾ ದೇಶಗಳಲ್ಲಿ ಮಿಡತೆ ಹಾವಳಿ ಹೆಚ್ಚು, ಅಲ್ಲಿಂದ ಮಧ್ಯಪ್ರಾಚ್ಯದ ಮೂಲಕ ಪಾಕ್ ಪ್ರವೇಶಿಸಿ ಭಾರತದ ಕಡೆಗೆ ಇವು ವಲಸೆ ಬರುತ್ತವೆ. ಜತೆಗೆ ಮಿಡತೆಗಳ ಸಂತಾನ ಪ್ರಾದೇಶಿಕ ವಲಯದಲ್ಲೂ ಇದೆ.

8 ಸಾವಿರ ಕೋಟಿ ರೂ. ನಷ್ಟ?

ಮಿಡತೆಗಳನ್ನು ಶೀಘ್ರ ನಿಯಂತ್ರಿಸ ದಿದ್ದಲ್ಲಿ ಇಡೀ ಹೆಸರು ಹೊಲಗಳು ನಿರ್ನಾಮವಾಗುತ್ತವೆ. ಇದರಿಂದ ಕನಿಷ್ಠ -ಠಿ; 8 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗುವ ಸಂಭವ ಇದೆ ಎಂದು ಕೃಷಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಣ್ಣು ಮತ್ತು ತರಕಾರಿ ಸಸ್ಯಗಳ ನರ್ಸರಿಗಳನ್ನು ಮಿಡತೆಗಳಿಂದ ರಕ್ಷಿಸದಿದ್ದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯೂ ರೈತರಿಗೆ ದಕ್ಕುವುದಿಲ್ಲ ಎಂದೂ ಹೇಳಿದ್ದಾರೆ.

ರಾಸಾಯನಿಕ ಅಸ್ತ್ರ

ಮಿಡತೆ ದಾಳಿ ತಡೆಯಲು ರಾಸಾಯನಿಕ ಸಿಂಪಡಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಕೇಂದ್ರ ಸರ್ಕಾರದ ನಾಲ್ಕು ತಂಡಗಳ ಜತೆಗೆ ಮಧ್ಯಪ್ರದೇಶದ ಕೃಷಿ ಇಲಾಖೆಯ ತಂಡಗಳೂ ಸಿಂಪಡಣೆ ಕಾರ್ಯದಲ್ಲಿ ತೊಡಗಿವೆ. ಟ್ರಾ್ಯಕ್ಟರ್ ಮತ್ತು ಅಗ್ನಿಶಾಮಕ ದಳದ ವಾಹನದ ಮೂಲಕ ಜಮೀನುಗಳಲ್ಲಿ ಸಿಂಪಡಣಾ ಕಾರ್ಯ ಸಾಗಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲೂ ಅಗ್ನಿಶಾಮಕ ದಳದ ವಾಹನ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಇಲ್ಲಿ ಮಿಡತೆಗಳ ಹಿಂಡು ಸುಮಾರು 3 ಕಿ.ಮೀ. ದೂರದವರೆಗೂ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net