

ಮಿಷಿಗನ್: ಮಗುವಿನ ಬರುವಿಕೆಗಾಗಿ ಅಪ್ಪ- ಅಮ್ಮ ಎಷ್ಟು ಕಾತರದಿಂದ ಕಾದಿರುತ್ತಾರೋ, ಅಜ್ಜ- ಅಜ್ಜಿ ಅದಕ್ಕಿಂತಲೂ ಸ್ವಲ್ಪ ಹೆಚ್ಚೇ ಆಸೆ ಕಂಗಳಿನಿಂದ ಎದುರು ನೋಡುತ್ತಿರುತ್ತಾರೆ. ಮೊಮ್ಮಗುವನ್ನು ಎತ್ತಿಕೊಂಡು ಯಾವಾಗ ಮುದ್ದಾಡುತ್ತೇನೋ ಎನ್ನುವ ಆಸೆ ಅಜ್ಜ-ಅಜ್ಜಿಗೆ.
ಅದೇ ರೀತಿ ಅಮೆರಿಕದ ಮಿಷಿಗನ್ ನಗರದ ಅಜ್ಜನೂ ಮೊಮ್ಮಗುವಿನ ಆಸೆಯಲ್ಲಿ ಕಾದು ಕುಳಿತಿದ್ದ. ಸೊಸೆ ಮುದ್ದಾದ ಹೆಣ್ಣುಮಗವನ್ನು ಹೆತ್ತಳು. ಇನ್ನೇನು ಮಗುವನ್ನು ನೋಡಲು ಮಗನ ಮನೆಗೆ ಹೋಗಲು ತುದಿಗಾಲಲ್ಲಿ ಈ ಅಜ್ಜ ನಿಂತಿದ್ದ. ಅಷ್ಟೊತ್ತಿಗಾಗಲೇ ಕರೊನಾ ಮಹಾಮಾರಿ ಇಡೀ ನಗರವನ್ನು ವ್ಯಾಪಿಸಿತ್ತು. ಮಿಷಿಗನ್‌ನಲ್ಲೂ ಲಾಕ್‌ಡೌನ್ ಶುರುವಾಯಿತು. ಸಾರಿಗೆ ಎಲ್ಲವೂ ಸ್ಥಗಿತಗೊಂಡಿತು.
ಆದರೆ ಅಜ್ಜನಿಗೆ ಮಗುವನ್ನು ನೋಡಲೇಬೇಕೆಂಬ ಹಂಬಲ. ಮಗನ ಮನೆ ಆರು ಕಿ.ಮೀ ದೂರ. ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ನಡೆದೇ ಹೋಗುವ ಹಂಬಲದಿಂದ ಸರಿ ಎಂದು ಒಂದು ದಿನ ಅಜ್ಜ ನಡೆದೇ ಹೋದ. ಮನೆಯಲ್ಲಿ ಯಾರ ಮಾತನ್ನೂ ಕೇಳದ ಅಜ್ಜ, ಮೊಮ್ಮಗಳನ್ನು ನೋಡಿಯೇ ತೀರುವೆ ಎಂದು ಹೊರಟುನಿಂತ. ಮಗನ ಮನೆಯ ಸಮೀಪವೂ ಬಂದಾಯಿತು. ಆದರೆ ಅಷ್ಟು ದೂರ ನಡೆದು ಬಂದಿರುವ ಕಾರಣ, ಕರೊನಾ ವೈರಸ್ ಯಾರನ್ನು ಹೇಗೆ ಆವರಿಸಿಕೊಳ್ಳುತ್ತದೆಯೋ ಎಂದು ಹೇಳಲಾಗದು ಎನ್ನುವ ಕಾರಣಕ್ಕೆ ಅಜ್ಜ, ಮಗುವನ್ನು ಮನೆಯ ಗ್ಲಾಸ್‌ನಿಂದ ನೋಡಿದ. ಮುದ್ದಾದ ಮಗುವನ್ನು ಎತ್ತಿ ಆಡಿಸುವ ಆಸೆಯಾದರೂ ಅದು ಸಾಧ್ಯವಾಗಲಿಲ್ಲ. ಗಾಜಿನಿಂದಲೇ ನೋಡಿ ಖುಷಿಪಟ್ಟು ಮನೆಗೆ ಹೋದ ಅಜ್ಜನಿಗೆ ಮತ್ತೆ ಮೊಮ್ಮಗಳ ನೆನಪು ಕಾಡತೊಡಗಿತು.
ಮಾರನೆಯ ದಿನವೂ ಮಗನ ಮನೆಗೆ ಹೋದ. ಹೀಗೆ ದಿನವೂ ಇದು ಮುಂದುವರೆದಿದೆ. ಅಷ್ಟು ದೂರ ನಡೆದು ಬರಬೇಡ ಎಂದು ಮಗ ಹೇಳಿದರೂ ಅಜ್ಜ ಕೇಳುತ್ತಿಲ್ಲವಂತೆ. ಮಗನ ಮನೆಗೆ ಬರುವುದು, ಗಾಜಿನ ಮೂಲಕ ಮಗುವನ್ನು ನೋಡಿ ಖುಷಿಯಿಂದ ಹೋಗುವುದು ನಡೆದೇ ಇದೆ. ಈಗ ಮಗ ದಿನವೂ ಮಗುವಿನ ಫೋಟೋ ಫೋನಿನ ಮೂಲಕ ಕಳಿಸುವೆ, ಇಷ್ಟು ದೂರ ಬರುವುದು ಬೇಡ ಎಂದು ಹೇಳಿ ಹೇಗೋ ಸಮಾಧಾನ ಮಾಡಿದ್ದಾನಂತೆ.
ಮೊಮ್ಮಗುವಿನ ಮೇಲೆ ಅಜ್ಜನ ಈ ಪ್ರೀತಿಯನ್ನು ಜಿಲೆಟ್ ಎಂಬುವವರು ಫೇಸ್‌ಬುಕ್‌ನಲ್ಲಿ ಫೋಟೋ ಸಹಿತ ಶೇರ್ ಮಾಡಿದ್ದಾರೆ. ಇದು ಈಗ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಜ್ಜ-ಮೊಮ್ಮಗುವಿನ ಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ ಎಂದೂ ಅನೇಕರು ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್)