ಅಜ್ಜಿಯ ಬಾಲ್ಯದ ಕನಸನ್ನ ನನಸಾಗಿಸಿದ ಮೊಮ್ಮಗಳು; ಖುಷಿಯಿಂದ ಕಣ್ಣೀರಿಟ್ಟ ಅಜ್ಜಿ

barbie
Published on

ಬ್ರೆಸಿಲಿಯಾ: ಅಜ್ಜಿ ಎಂದರೆ ಯಾವ ಮೊಮ್ಮಕ್ಕಳಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಅದೇ ರೀತಿ ಪ್ರೀತಿ ಮಾಡುತ್ತಿದ್ದ ಅಜ್ಜಿಗೆ ಮೊಮ್ಮಗಳೊಬ್ಬಳು ಕೊಟ್ಟ ಗಿಫ್ಟ್​ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ಗಿಫ್ಟ್ ಕಂಡು ಅಜ್ಜಿ ಖುಷಿಯಿಂದ ಕಣ್ಣೀರು ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬ್ರೆಜಿಲ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆ ಅಜ್ಜಿಗೆ ಚಿಕ್ಕ ವಯಸ್ಸಿನಿಂದಲೂ ಬಾರ್ಬಿ ಡಾಲ್ ಎಂದರೆ ಬಹಳ ಇಷ್ಟವಿತ್ತಂತೆ. ಆದರೆ ಅನೇಕ ಕಾರಣಗಳಿಂದ ಆಕೆಗೆ ಬಾರ್ಬಿ ಡಾಲ್​ನ್ನು ಯಾರೂ ತಂದುಕೊಟ್ಟಿರಲಿಲ್ಲ. ಅದಾದ ಮೇಲೆ ಆಕೆಯೂ ಮದುವೆ, ಮಕ್ಕಳು, ಮೊಮ್ಮಕ್ಕಳು ಎಂದುಕೊಂಡು ಜೀವನ ಕಳೆದಿದ್ದಳು. ಬಾರ್ಬಿ ಡಾಲ್ ಆಕೆಗೆ ನನಸಾಗದ ಕನಸಾಗಿಯೇ ಉಳಿದುಬಿಟ್ಟಿತ್ತು.

ಅಜ್ಜಿಯ ಕನಸಿನ ಅರಿವಿದ್ದ ಮೊಮ್ಮಗಳು ಇತ್ತೀಚೆಗೆ ಅಜ್ಜಿಗೆ ಗಿಫ್ಟ್ ಒಂದನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದಾಳೆ. ಅದನ್ನು ಓಪನ್ ಮಾಡುತ್ತಿದ್ದಂತೆಯೇ ಅಜ್ಜಿ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ಅಂದ ಹಾಗೆ ಆ ಗಿಫ್ಟ್​ ಬಾಕ್ಸ್​ನಲ್ಲಿ ಇದ್ದಿದ್ದು ಒಂದು ಬಾರ್ಬಿ ಡಾಲ್​.

ಅಜ್ಜಿ ಗಿಫ್ಟ್ ಬಾಕ್ಸ್ ತೆರೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕ ವಯಸ್ಸಿನಲ್ಲಿ ತಾನು ಕಂಡಿದ್ದ ಕನಸನ್ನು ಮೊಮ್ಮಗಳು ಈಡೇರಿಸಿದಳೆಂಬ ಖುಷಿಯನ್ನು ಅವರ ಮುಖದಲ್ಲಿ ನೀವು ಕಾಣಬಹುದಾಗಿದೆ. ಆ ವಿಡಿಯೋ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ವಾಲ್​ಗಳಿಗೆ ಶೇರ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net