

ಹಾವೇರಿ: ದಾನಿಗಳ ಸಹಕಾರದೊಂದಿಗೆ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆ.ಪಿ.ಎಸ್ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿಯ ವಿನಾಯಕ ನಗರದಲ್ಲಿ ಶ್ರೀ ಗಂಗಾಧರ ನಂದಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಡಳಿತ ಭವನದ ಉದ್ಘಾಟನೆ ಹಾಗೂ ಕಾದಂಬರಿ ಪಿತಾಮಹ ಗಳಗನಾಥರ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀಮಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಹಾಗೂ ಬಡವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನಕ್ಕೆ ಬದ್ಧವಾಗಿದೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿ ಕನ್ನಡ ಉಳಿವಿಗೆ ಕೂಗುವ ಪಾಲಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣೆಗೆ ಶ್ರೀ ಗಂಗಾಧರ ನಂದಿ ಅವರ ಹೆಸರಿನಡಿ ಆಡಳಿತ ಭವನ ಉದ್ಘಾಟಿಸಿರುವುದು ನನ್ನ ಪುಣ್ಯ. ಸಮ್ಮೇಳನ ಪಕ್ಷಾತಿತ, ಜಾತ್ಯತಿತ ಮಾದರಿಯಲ್ಲಿ ಯಶಸ್ವಿಯಾಗಿ ಜರುಗಿರುವುದು ನಮ್ಮೆಲ್ಲರ ಹೆಮ್ಮೆ. ಸಮ್ಮೇಳನದ ಬಳಿಕ ಉಳಿದ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ನನ್ನ ಪಾಲಿನ ಕರ್ತವ್ಯವನ್ನು ಅಭಿಮಾನದಿಂದ ಮಾಡಿದ್ದೇನೆ. ಉಳಿದಿರುವ 70 ಲಕ್ಷ ರೂ.ಗಳ ಜೊತೆಗೆ ಸರ್ಕಾರದ ಅನುದಾನದಲ್ಲಿ ನೂತನ ಕಟ್ಟಡ ನಿಮಿರ್ಸಬಹುದು ಎಂದರು.
ಸಮ್ಮೇಳನದಲ್ಲಿ ಸಮಗ್ರ ಕನ್ನಡ ಭಾಷಾ ವಿಧೇಯಕ ಜಾರಿ ಆಗಲೇಬೇಕು ಎಂಬ ನಿರ್ಣಯ ತೆಗೆದುಕೊಂಡೆವು. ಕನ್ನಡದ ಶಾಲೆಗಳು ಮುಚ್ಚಬಾರದು. ಕನ್ನಡ ಅನ್ನದ ಭಾಷೆ ಆಗಬೇಕು ಎಂಬ ಕನಸು ಕಂಡೆ ಆಗಲಿಲ್ಲ. ಬಹಳ ವಿಷಾಧದಿಂದ ಹೇಳುವೆ ಕನ್ನಡದ ಶಾಲಾ ಕಟ್ಟಡಗಳು ಬಿರುಕು ಬಿಟ್ಟಿವೆ. ಶಿಕ್ಷಕರ ಕೊರತೆ ಇದೆ. ಕನ್ನಡ ಶಾಲೆಗಳಿಗೆ ಸೇರಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರ ಚರ್ಚೆ ನಡೆಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಸಾಹಿತ್ಯ ಪರಿಷತ್ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿವೆ. ಸಂಘಟನೆ ಹುಟ್ಟಿ ಹಾಕಿದವರನ್ನು ನೆನೆಸುವುದು ನಮ್ಮ ಕರ್ತವ್ಯ. ನಾಲ್ವಡಿ ಕೃಷ್ಣರಾಜ ಅರಸರು, ಸರ್ ಎಂ.ವಿಶ್ವೇಶ್ವರಯ್ಯ ನವರು ಕಸಾಪ ಪ್ರಾರಂಭ ಹಾಗೂ ಸಂಘಟನೆಗಾಗಿ ಶ್ರಮಿಸಿದ್ದಾರೆ. ಸ್ವಾತಂರ್ತ್ಯ ಪೂರ್ವದಲ್ಲೇ ಕನ್ನಡದ ಸಂಘಟನೆಗೆ ಚಿಂತನೆ ನಡೆಸಿದ್ದಾರೆ ಎಂದರು.
ಕಸಾಪ ಇರದಿದ್ದರೆ, ಬಳ್ಳಾರಿ, ಬೆಳಗಾವಿ, ಕಾಸರಗೋಡು, ಬೆಂಗಳೂರು ಏನಾಗುತ್ತಿತ್ತು ಎಂಬುದನ್ನು ಊಹಿಸಲು ಆಗುತ್ತಿರಲಿಲ್ಲ. ತಮಿಳು, ತೆಲುಗು, ಮರಾಠಿ ಗರ ಆಕ್ರಮಣ ತಡೆಗೆ ಸಹಕಾರಿ ಆಗಿದೆ. ಕರ್ನಾಟಕ ಏಕೀಕರಣದಲ್ಲಿ ಶಕ್ತಿ ಪ್ರದಶಿರ್ಸಿದೆ ಎಂದರು.
ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕಸಾಪ ಕಚೇರಿಗೆ ಜಾಗ ಇರಲಿಲ್ಲ. ನಾನು ಶಾಸಕನಾಗಿದ್ದಾಗ ಶಾಸಕರ ಕಚೇರಿಯಲ್ಲೇ ಸ್ಥಳಾವಕಾಶ ಮಾಡಿಕೊಟ್ಟಿದ್ದೆ. ಹೊಸ ಜಾಗ ಹುಡುಕಿ ಎಂದು ಪಟ್ಟಿ ಮಾಡಿಕೊಟ್ಟೆ. ಜಾಗ ಹುಡುಕಿದಾಗ ನನ್ನ ಶಾಸಕರ ಅನುದಾನದಲ್ಲಿ ಹತ್ತು ಲಕ್ಷ ಅನುದಾನ ಕೊಟ್ಟೆ. ಆಗ ಸಣ್ಣದಾಗಿ ಪ್ರಾರಂಭವಾದ ಚಿಂತನೆ ಈಗ ಜಿಲ್ಲಾ ಭವನ ನಿರ್ಮಾಣದ ಕನಸು ನನಸಾಗುತ್ತಿದೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.
ಪ್ರಮುಖರಾದ ಡಿ.ಎಂ. ಸಾಲಿ, ಸಂಜೀವಕುಮಾರ ನೀರಲಗಿ, ಪವನ ಬಹದ್ದೂರ ದೇಸಾಯಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಎಂ.ಎಂ. ಹಿರೇಮಠ, ಎಂ.ಎಂ. ಮೈದೂರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಡಾ.ಲಿಂಗರಾಜ ಅಂಗಡಿ, ಎಸ್.ಎಫ್.ಎನ್ ಗಾಜಿಗೌಡ್ರ, ಸಾಹಿತಿ ಗಂಗಾಧರ ನಂದಿ ಅವರ ಪತ್ನಿ ಸುಲೋಚನಾ ನಂದಿ ಮತ್ತಿತರರು ಉಪಸ್ಥಿತರಿದ್ದರು.