

ಚಾಮರಾಜನಗರ: ಯಾರದೋ ಮೊಬೈಲ್ ಕರೆ ಬಂತೆಂದು ಬುಧವಾರ ರಾತ್ರಿ ಮನೆಯಿಂದ ಹೊರ ಹೋದ ಗ್ರಾಪಂ ಬಿಲ್ ಕಲೆಕ್ಟರ್ ಗುರುವಾರ ಬೆಳಗ್ಗೆ ಆಶಾ ಕಾರ್ಯಕರ್ತೆ ಮನೆ ಮುಂದೆ ಶವವಾಗಿ ಪತ್ತೆಯಾಗಿದ್ದಾರೆ.
ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಬಸವರಾಜು(38) ಮೃತ. ರಾತ್ರಿ ಇವರ ಮೊಬೈಲ್ಗೆ ಯಾವುದೋ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೊರ ಹೋದವರು ಅಂದು ಮನೆಗೆ ವಾಪಸ್ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಗ್ರಾಮದ ಆಶಾ ಕಾರ್ಯಕರ್ತೆ ಶಾರದಾ ಎಂಬುವವರ ಮನೆ ಮುಂದೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಬೈಕ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗ ನಿಂತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕರೊನಾ ಹಿನ್ನೆಲೆ ಬಸವರಾಜು ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತ್ನಿ ಮತ್ತು ಒಂದೂವರೆ ವರ್ಷದ ಗಂಡು ಮಗು ಇದೆ. ಅನುಮಾನಾಸ್ಪದ ರೀತಿಯಲ್ಲಿ ಬಿಲ್ ಕಲೆಕ್ಟರ್ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸುನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ನೋಡಿ