ಮುಗಿದ ಮತದಾನ, ಫಲಿತಾಂಶದತ್ತ ಗಮನ

gp election
Published on

ಬೆಂಗಳೂರು: ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆಗಾಗಿ ಭಾನುವಾರ ತುರುಸಿನ ಮತದಾನವಾಗಿದ್ದು, ಕೆಲವೆಡೆ ಗೊಂದಲ, ವಾಗ್ವಾದ, ಪ್ರತಿಭಟನೆ ಹೊರತುಪಡಿಸಿ ಶಾಂತಿಯುತವಾಗಿ ನಡೆದಿದೆ. ರಾಜ್ಯ ಚುನಾವಣೆ ಆಯೋಗದ ಮಾಹಿತಿ ಪ್ರಕಾರ ಒಟ್ಟಾರೆ ಶೇ.80.71 ಮತದಾನ ಅಂದಾಜಿಸಲಾಗಿದ್ದು, 122 ಕರೊನಾ ಸೋಂಕಿತರು ಹಕ್ಕು ಚಲಾಯಿಸಿದ್ದಾರೆ.

ಆಯಾ ತಾಲೂಕು ಕೇಂದ್ರಗಳಲ್ಲಿ ಡಿ.30ರಂದು ಮತಗಳ ಎಣಿಕೆ ಕಾರ್ಯ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಎರಡೂ ಹಂತಗಳಲ್ಲಿ ಒಟ್ಟು 5,728 ಗ್ರಾ.ಪಂ.ಗಳು, 82,616 ಸ್ಥಾನಗಳಿಗೆ ನಡೆದ ಚುನಾವಣೆಗೆ 2,22,616 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಲ್ಲದೆ, 8,074 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣಕ್ಕೆ 648 ಸ್ಥಾನಗಳು ಖಾಲಿ ಉಳಿದಿವೆ.

ಸ್ಪರ್ಧಾ ಅಖಾಡಕ್ಕೆ ಧುಮುಕಿದ ಉಮೇದುವಾರರ ಉಮೇದಿಗೆ ತಕ್ಕಂತೆ ಮತದಾರ ಪ್ರಭುಗಳು ಉತ್ಸಾಹದಿಂದಲೇ ಸ್ಪಂದಿಸಿ, ಮತಗಟ್ಟೆ ಮುಂದೆ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ತೀವ್ರ ಪೈಪೋಟಿ ಏರ್ಪಟ್ಟ ಕ್ಷೇತ್ರಗಳಲ್ಲಿ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕೊನೆ ಘಳಿಗೆವರೆಗೆ ಕಸರತ್ತು ನಡೆಸಿದರೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಸೆಯಾಗಿ ನಿಂತು ಶ್ರಮಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಟನಕೇರಿ ಗ್ರಾಮವನ್ನು ಗ್ರಾ.ಪಂ. ಕೇಂದ್ರವನ್ನಾಗಿ ಮಾಡಲು ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದು, ಗ್ರಾಮದ 7 ಸ್ಥಾನಗಳಿಗೆ ಮತಗಳು ಚಲಾವಣೆಯಾಗಿಲ್ಲ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ 1ನೇ ವಾರ್ಡ್​ನಲ್ಲಿ ಮತಗಟ್ಟೆ ಅಧಿಕಾರಿ 2 ಮತಗಳು ಚಲಾವಣೆಗೆ ಹೇಳಿದರೆ, ಪೂರ್ವ ಮಾಹಿತಿಯಂತೆ 4 ಮತಗಳ ಚಲಾವಣೆಗೆ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಒಬ್ಬರಿಗೆ ಮತ ಹಾಕಿದ್ರೆ ಇನ್ನೊಬ್ಬರಿಗೆ ಉಚಿತ!

ಬೀದರ್: ಇವಿಎಂ ಉಪಯೋಗಿಸಿ ಗ್ರಾಪಂ ಚುನಾವಣೆ ನಡೆಸಿದ ಏಕೈಕ ಜಿಲ್ಲೆ ಬೀದರ್​ನ ಕಪಲಾಪುರ (ಎ) ಗ್ರಾಮದಲ್ಲಿ, ಒಬ್ಬರಿಗೆ ಬಟನ್ ಒತ್ತಿದರೆ ಬಟನ್ ಒತ್ತಿದ ಅಭ್ಯರ್ಥಿ ಜತೆಯಲ್ಲಿ ಇನ್ನೊಬ್ಬ ಅಭ್ಯರ್ಥಿ ಹೆಸರಿನಲ್ಲೂ ಕೆಂಪು ಲೈಟ್ ಬೀಳುತ್ತಿತ್ತು. ಗ್ರಾಮದ ವಾರ್ಡ್ ನಂ.2ರಲ್ಲಿ ಈ ಸಮಸ್ಯೆ ಕಾಣಿಸಿತ್ತು. ಇದನ್ನು ಗಮನಿಸಿ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು. ಇವಿಎಂ ತಜ್ಞರನ್ನು ಸ್ಥಳಕ್ಕೆ ಕರೆಸಿ ಮತಯಂತ್ರ ರಿಪೇರಿ ಮಾಡಲಾಯಿತು. ಇವಿಎಂ ದೋಷ ಕಂಡ ಹಿನ್ನೆಲೆಯಲ್ಲಿ ರಾತ್ರಿ 8ರವರೆಗೆ ಇಲ್ಲಿ ಮತದಾನ ನಡೆದಿದೆ. ಹೊಸ ಇವಿಎಂ ಅಳವಡಿಸುವ ಮೊದಲು 80 ಮಂದಿ ಮತದಾನ ಮಾಡಿದ್ದರು. ಇವರು ಹಾಕಿದ ಮತ ಯಾರಿಗೆ ಹೋಗಿದೆ? ಏನಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪತಿಪತ್ನಿ ಒಂದಾಗಿಸಿದ ಎಲೆಕ್ಷನ್

ಶಿರಾ: ವೈಮನಸ್ಯದಿಂದ ಪರಸ್ಪರ ದೂರಾಗಿದ್ದ ಪತಿ - ಪತ್ನಿಯನ್ನು ಗ್ರಾಮ ಪಂಚಾಯಿತಿ ಚುನಾವಣೆ ಮತ್ತೆ ಒಂದುಗೂಡಿಸಿದೆ. ತಾಲೂಕಿನ ಮದಲೂರು ಗ್ರಾಪಂ ವ್ಯಾಪ್ತಿಯ ಹುಳಿಗೆರೆಯ ಗುರುಶಾಂತಮ್ಮ ಪತಿ ಗೋವಿಂದಪ್ಪ ಮೇಲೆ ಮುನಿಸಿಕೊಂಡು 6 ತಿಂಗಳ ಹಿಂದೆ ತವರಿಗೆ ತೆರಳಿದ್ದರು. ಭಾನುವಾರ ಮತಗಟ್ಟೆಗೆ ಮತಚಲಾಯಿಸಲು ಮುಖಾಮುಖಿಯಾದ ದಂಪತಿ ಪರಸ್ಪರ ಮುನಿಸು ಮರೆತು ಮಾತನಾಡಿದರು. ಅಲ್ಲದೆ ಮತದಾನ ಮಾಡಿದ ನಂತರ ದಂಪತಿ ಜತೆಯಾಗಿ ಮನೆ ಸೇರಿದರು.

ಕೆಲವೆಡೆ ಮಾಟ-ಮಂತ್ರ

ಎರಡನೇ ಹಂತದ ಚುನಾವಣೆ ವೇಳೆ ಕೆಲ ಗ್ರಾಮಗಳಲ್ಲಿ ವಿರೋಧಿಗಳನ್ನು ಸೋಲಿಸಲು ಮಾಟ-ಮಂತ್ರದ ಮೊರೆ ಹೋಗಲಾಗಿದೆ. ಮತಗಟ್ಟೆ ಕೇಂದ್ರದ ಮುಂಭಾಗದ ಅಭ್ಯರ್ಥಿಗಳ ಭಾವಚಿತ್ರ ಇರುವ ಬ್ಯಾಲೆಟ್​ ಪೇಪರ್​, ಅರಿಶಿಣ-ಕುಂಕುಮ ಹಚ್ಚಿದ ದಾರದ ಉಂಡೆ ಇಡಲಾಗಿದೆ. ಇನ್ನೂ ಕೆಲವೆಡೆ ಕೋಳಿ, 1 ಪರಿವಾಳ ಕೊಯ್ದು ಹಾಕಲಾಗಿದೆ. ನಿಂಬೆಹಣ್ಣು ಇರಿಸಿ, ಕುಂಕುಮ ಎರಚಲಾಗಿದೆ.

ಮತಗಟ್ಟೆ ಬಳಿ ಮತ್ತೇನಾಯ್ತು?

  • ಕಲಬುರಗಿ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಗರ್ಭಿಣಿ ಯೊಬ್ಬರಿಗೆ ವಾಡಿ ಸಮೀಪದ ಇಂಗಳಗಿಯಲ್ಲಿ ಮತದಾನ ಆರಂಭಕ್ಕೆ ಕೆಲ ಹೊತ್ತು ಮುಂಚೆ ಹೆರಿಗೆಯಾಗಿದೆ.
  • ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳ್ಳೆ ಗ್ರಾಪಂ ವಾರ್ಡ್ ಸಂಖ್ಯೆ 1ರಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಅಮಿತಾ ಭಾನುವಾರ ಮತದಾನದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ.
  • ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿರಗಾನಹಳ್ಳಿಯ ಮತಗಟ್ಟೆಯೊಂದರ ಮುಂಭಾಗ ನಿಂಬೆಹಣ್ಣು, ಅಕ್ಕಿ, ಕುಂಕುಮ ಎರಚಿ, ಮತಕೇಂದ್ರದ ಸುತ್ತಲೂ ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net