

ಮೂಡಿಗೆರೆ: ಕೃಷಿ ಇಲಾಖೆಯಲ್ಲಿ ಬಿತ್ತನೆಬೀಜ, ಕೃಷಿ ಸಂಬಂಧಿತ ರಾಸಾಯನಿಕ, ಟಾರ್ಪಲ್ ಸೇರಿದಂತೆ ರೈತರಿಗೆ ವಿತರಿಸಬೇಕಿದ್ದ ವಿವಿಧ ಸವಲತ್ತುಗಳನ್ನು ಮಧ್ಯವರ್ತಿಗಳ ಮೂಲಕ ಕೃಷಿ ಇಲಾಖೆ ಅಧಿಕಾರಿಗಳು ಕೃಷಿಕರಲ್ಲದವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಗೋಣಿಬೀಡು ಗ್ರಾಪಂ ಸದಸ್ಯ ಕೆ.ಆರ್.ಮಹೇಶ್ ಆರೋಪಿಸಿದರು.
ಗುರುವಾರ ಗೋಣಿಬೀಡು ಸೂಪರ್ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ನೈಜ ಫಲಾನುಭವಿ ರೈತರಿಗೆ ಕೃಷಿ ಇಲಾಖೆಯಿಂದ ಉಪಯೋಗವಿಲ್ಲ. ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕೃಷಿ ಇಲಾಖೆಯನ್ನು ಸರ್ಕಾರ ಶುದ್ಧೀಕರಿಸುವ ಅಗತ್ಯವಿದೆ ಎಂದರು.
ಈ ಬಾರಿ ರೈತರಿಗೆ 120 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಿಸಲಾಗಿದೆ. ರಾಸಾಯನಿಕ ರಿಯಾಯಿತಿ ದರದಲ್ಲಿ ನೀಡಲಾಗಿದೆ. 90 ಟಾರ್ಪಲ್ಗಳನ್ನು ವಿತರಿಸಿದ್ದೇವೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ಮಾಹಿತಿ ನೀಡಿದರು. ಅವರ ಮಾಹಿತಿಯಿಂದ ಕೆರಳಿದ ಸದಸ್ಯ ಕೆ.ಆರ್.ರಮೇಶ್, ಯಾವ ರೈತರಿಗೆ ಭತ್ತದ ಬಿತ್ತನೆ ಬೀಜ, ಟಾರ್ಪಲ್ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಿದ್ದೀರಿ. ಸಭೆಗೆ ಸಂಪೂರ್ಣ ಮಾಹಿತಿ ಒದಗಿಸಿ ಎಂದಾಗ ತಡವರಿಸಿದ ಅಧಿಕಾರಿ ವೆಂಕಟೇಶ್ ಮಾಹಿತಿ ತಂದಿಲ್ಲ, ಈಗ ತರಿಸುತ್ತೇನೆ ಎಂದರು.
ಕೆ.ಆರ್.ಮಹೇಶ್ ಮಾತನಾಡಿ, ಗ್ರಾಮಸಭೆಗೆ ಅಧಿಕಾರಿಗಳು ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ಇಲ್ಲದಿದ್ದರೆ ನೀವು ಬರುವ ಅಗತ್ಯವೇನಿದೆ. ನಿಮಗೆ ಇಲ್ಲೇನು ಕೆಲಸವಿದೆ. ಗ್ರಾಮಸಭೆಗೆ ಬಂದಿರುವ ಗ್ರಾಮಸ್ಥರನ್ನು ಅಧಿಕಾರಿಗಳು ಅವಮಾನಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಪ್ರಹ್ಲಾದ, ರಾಧಾಮಿತೇಶ್, ಜುಬೇದಾ, ಆನಂದ, ಸುಪ್ರೀತಾ, ವಿಜಯೇಂದ್ರ, ಸುಜಾತಾ, ಕೃಷ್ಣಪ್ಪ, ನೋಡಲ್ ಅಧಿಕಾರಿ ಯಮುನಾ, ಪಿಡಿಒ ಸಿಂಚನಾ ವಿವಿಧ ಇಲಾಖೆ ಅಧಿಕಾರಿಗಳಿದ್ದರು.