ಪ್ರತಿ ಚುನಾವಣೆಗೂ ಹೆಸರು ನೊಂದಾಯಿಸುವ ಕ್ರಮ ಕೈಬಿಡಿ

6-RNR-06
Published on

ರಾಣೆಬೆನ್ನೂರ: ಪದವೀಧರರ ಕ್ಷೇತ್ರದ ಚುನಾವಣಾ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರನ್ನು ನೊಂದಾಯಿಸಿದವರು ಪ್ರತಿಬಾರಿ ಚುನಾವಣೆಗೆ ಹೆಸರನ್ನು ನೊಂದಾಯಿಸುವ ಕ್ರಮ ಕೈ ಬಿಡಬೇಕು ಎಂದು ಒತ್ತಾಯಿಸಿ ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ವತಿಯಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷ ಭಾಸ್ಕರ್​ ಮುದೇನೂರ ಮಾತನಾಡಿ, ಕರ್ನಾಟಕ ವಿಧಾನ ಪರಿಷತ್​ ಆಗ್ನೇಯ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಲು ನ. 6 ಕೊನೆಯ ದಿನವಾಗಿದೆ.

ಕಳೆದ ಬಾರಿಯ ಚುನಾವಣೆಗಳಲ್ಲಿ ಪದವೀಧರರು ತಮ್ಮ ಹೆಸರನ್ನು ನೊಂದಾಯಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ ಸಹಿತ ಪ್ರತಿಬಾರಿಯೂ ಪ್ರತಿ ಚುನಾವಣೆಗೂ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವಂತೆ ಹೇಳಲಾಗುತ್ತಿದೆ. ಆದ್ದರಿಂದ ಈ ಕ್ರಮ ಕೈಬಿಡಬೇಕು.

2022ನೇ ಸಾಲಿನಲ್ಲಿ ಪದವಿ ಪಡೆದ ಪದವೀಧರರು ಮಾತ್ರ ಹೆಸರನ್ನು ನೊಂದಾಯಿಸಲು ಅವಕಾಶ ನೀಡಬೇಕು. 2020ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಪೂರ್ವದಲ್ಲಿ ಈಗಾಗಲೇ ಹೆಸರನ್ನು ನೊಂದಾಯಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವವರು ಪುನಃ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವ ಕ್ರಮವನ್ನು ಕೈಬಿಡಬೇಕು.

ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರುವುದಿಲ್ಲವೋ ಅಥವಾ ಯಾರ ಹೆಸರನ್ನು ಕೈ ಬಿಡಲಾಗಿರುತ್ತದೆಯೋ ಅಂಥವರು ಮಾತ್ರ ನೊಂದಾಯಿಸಲು ಅವಕಾಶ ನೀಡಬೇಕು. ರಾಜ್ಯದಲ್ಲಿ ಕೆ-ಸೆಟ್​, ಟಿ.ಇ.ಟಿ ಪರೀಕ್ಷೆಗಳಿಗೂ ಅಧಿಸೂಚನೆ ಹೊರಡಿಸಲಾಗಿರುವುದರಿಂದ ಬಹುತೇಕ ಹೊಸ ಪದವೀಧರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸುವ ದಿನಾಂಕ ವಿಸ್ತರಿಸಬೇಕು. ವಿಧಾನ ಸಭೆ ಚುನಾವಣೆಯಂತೆ ಪದವೀಧರರ ಕ್ಷೇತ್ರದ ಚುನಾವಣೆಗೂ ಬಿ.ಎಲ್​.ಒ ಅವರಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಕಾರ್ಯದಶಿರ್ ನಾಗರಾಜ ಗುಡಿಯವರ, ಶ್ರೀಧರ ಸಿ., ಸಂತೋಷ ಬಣಕಾರ, ವಿನಾಯಕ ಭಾನುವಳ್ಳಿ, ಮಲ್ಲೇಶಪ್ಪ ಮಡ್ಲೇರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net