ಪಿಯು ಕಾಲೇಜಲ್ಲಿ ಪದವಿ ಪ್ರವೇಶಾತಿ

collage
ಕೋಲಾರ ಪ್ರಥಮ ದರ್ಜೆ ಕಾಲೇಜು.
Published on

ಕೋಲಾರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿಗಳನ್ನು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿರುವುದರಿಂದ ಪ್ರಸಕ್ತ ಸಾಲಿನ ಪ್ರವೇಶಾತಿಗೆ ತೊಂದರೆಯಾಗಿದೆ. ಉಪನ್ಯಾಸಕರು ಜೂನಿಯರ್​ ಕಾಲೇಜು ಆವರಣದಲ್ಲಿ ಕಾಲೇಜು ಚಟುವಟಿಕೆ ಕೈಗೊಳ್ಳುವ ಪರಿಸ್ಥಿತಿ ಎದುರಾಗಿದೆ.

ಲೋಕಸಭಾ ಕ್ಷೇತ್ರದ ಚುನಾವಣೆ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಥಮ ದರ್ಜೆ ಕಾಲೇಜು ಕೊಠಡಿಗಳಲ್ಲಿ ಭದ್ರಪಡಿಸಲಾಗಿದೆ. ಜೂ.4ರಂದು ಮತಗಳ ಏಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಜೂನಿಯರ್​ ಕಾಲೇಜಿನಲ್ಲೆ ತರಗತಿ, ಪ್ರವೇಶ ಚಟುವಟಿಕೆ ಮಾಡಬೇಕಿದೆ. ಆದರೆ ಕೇವಲ ಎರಡು ಕೊಠಡಿಗಳನ್ನು ಪದವಿ ವಿಭಾಗಕ್ಕೆ ನೀಡಿರುವುದರಿಂದ ತರಗತಿಗಳನ್ನು ನಡೆಸಲು ತೊಂದರೆ ಎದುರಾಗಿದೆ. ಹೀಗಾಗಿ, ಸಿಬ್ಬಂದಿ ಕಾಲೇಜಿನ ಆವರಣದ ಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತು ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದರ ನಡುವೆ, ಹೊಸದಾಗಿ ಪ್ರವೇಶಾತಿಗೆ ಅರ್ಜಿ ಪಡೆಯಲು ವಿದ್ಯಾರ್ಥಿಗಳು ವಿಳಾಸ ಗೊತ್ತಾಗದೆ ಪರದಾಡುವಂತಾಗಿದೆ.

ಕಾಲೇಜಿಗೆ ರಜೆ
ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು, ಕ್ಲಸ್ಟರ್​ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕ ಮತ್ತಿತರ ಹುದ್ದೆಗಳಿಗೆ ಬಾಲಕಿಯರ ಜೂನಿಯರ್​ ಕಾಲೇಜಿನಲ್ಲೇ ಮೇ 14ರಿಂದ 16ರವರೆಗೆ ಪರೀಕ್ಷೆಗಳು ನಿಗದಿಯಾಗಿದ್ದ ಕಾರಣ ವಿಧಿಯಿಲ್ಲದೆ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು.

2 ಪಾಳಿಯಲ್ಲಿ ತರಗತಿ
ಪ್ರಥಮ ದರ್ಜೆ ಕಾಲೇಜಿನ ತರಗತಿಗಳನ್ನು ಎರಡು ಪಾಳಿಯಲ್ಲಿ ನಡೆಸಲಾಗುತ್ತಿದೆ. ಬೆಳಗ್ಗೆ ಬಿಎ, ಬಿಕಾಂ, ಬಿಎಸ್ಸಿ ಹಾಗೂ ಮಧ್ಯಾಹ್ನ ಬಿಎಸ್​ಡಬ್ಲ್ಯು, ಬಿಸಿಎ ತರಗತಿ ನಡೆಸಲಾಗುತ್ತಿದೆ. ಈಗಾಗಲೇ ಪದವಿಯ 1, 3, 5ನೇ ಸೆಮಿಸ್ಟರ್​ ಪರೀಕ್ಷೆಗಳು ಮುಗಿದು ಫಲಿತಾಂಶ ಬಾಕಿಯಿದೆ. ಸದ್ಯ 2, 4, 6ನೇ ಸೆಮಿಸ್ಟರ್​ ತರಗತಿಗಳು ಚಾಲ್ತಿಯಲ್ಲಿವೆ. ಜಾಗ ಸಮಸ್ಯೆಯಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಸಂಖ್ಯೆ ಕಡಿಮೆಯಾಗಿದೆ.
ಮೂಲಸೌಲಭ್ಯ ಕೊರತೆ
ಜೂನಿಯರ್​ ಕಾಲೇಜಿನಲ್ಲಿ ಮೊದಲೇ ಮೂಲಸೌಲಭ್ಯ ಕೊರತೆಯಿದೆ. ಇದರ ಮಧ್ಯೆ ಪದವಿ ತರಗತಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಸಮರ್ಪಕವಾಗಿ ಶೌಚದ ವ್ಯವಸ್ಥೆಯಿಲ್ಲ, ಕುಡಿಯುವ ನೀರು, ಕೊಠಡಿಗಳ ಕೊರತೆ ಹೀಗೆ ಹಲವು ಸಮಸ್ಯೆ ಹೆಚ್ಚಾಗಿವೆ. ಮತ ಏಣಿಕೆ ಮುಗಿಯುವ ತನಕ ಜೂನ್​ 6ರವರೆಗೆ ತರಗತಿಗಳನ್ನು ಜೂನಿಯರ್​ ಕಾಲೇಜಿನಲ್ಲೇ ನಡೆಸಬೇಕಾಗಿತ್ತು. ಇದರ ನಡುವೆ ಜೂ.1ರಿಂದ ಪಿಯುಸಿ ತರಗತಿಗಳು ಪುನರಾರಂಭಗೊಳ್ಳುವುದರಿಂದ ಕೊಠಡಿಗಳನ್ನು ಬಿಟ್ಟುಕೊಡಬೇಕಾಗಿದೆ. ಆಗ 6 ದಿನಗಳ ಕಾಲ ಪದವಿ ತರಗತಿಗಳಿಗೆ ರಜೆ ನೀಡುವ ಅನಿವಾರ್ಯ ಎದುರಾಗಿದೆ.
ತಪ್ಪಿದ ಅವಕಾಶ
ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪರೀಕ್ಷೆ ನಡೆಸುವ ಹಾಗೂ ಪದವಿ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನದ ಅವಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಲಭಿಸಿತ್ತು. ಕೊಠಡಿ ಕೊರತೆ ಕಾರಣ ಪರೀೆಯನ್ನು ಆರ್​.ವಿ.ಕಾಲೇಜಿಗೆ ಹಾಗೂ ಮೌಲ್ಯಮಾಪನವನ್ನು ಕೆ.ಆರ್​.ಪುರಂ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

  • ಪ್ರವೇಶ ಪ್ರಕ್ರಿಯೆಗೆ ತೊಡಕು
    ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲಾಗುತ್ತಿದೆ. ದ್ವೀತಿಯ ಹಾಗೂ ಅಂತಿಮ ವರ್ಷದಲ್ಲಿ 1,700 ವಿದ್ಯಾರ್ಥಿಗಳಿದ್ದಾರೆ. ಪ್ರಥಮ ಪದವಿ ಪ್ರವೇಶಾತಿ ಪ್ರಾರಂಭವಾಗಿದ್ದು, ಕಾಲೇಜನ್ನು ಮತ ಏಣಿಕೆಗೆ ಉಪಯೋಗಿಸಿಕೊಳ್ಳುತ್ತಿರುವುದರಿಂದ ಪ್ರವೇಶ ಮಾಡಿಕೊಳ್ಳಲು ತೊಂದರೆ ಎದುರಾಗಿದೆ ಎಂದು ಪ್ರಾಂಶುಪಾಲ ಪ್ರೊ.ಶ್ರೀನಿವಾಸಗೌಡ ಹೇಳಿದರು.

ರಿಪೇರಿ ಮಾಡಿಸಿಕೊಡಿ
ಮತಯಂತ್ರಗಳನ್ನು ಕಾಲೇಜಿನಲ್ಲಿ ಭದ್ರಪಡಿಸಲಾಗಿದ್ದು, ಬಾಗಿಲು, ಕಿಟಕಿಗಳಿಗೆ ಹಲಗೆ ಹೊಡೆಯಲಾಗಿದೆ. ಸಿಸಿಟಿವಿ, ವೈರಿಂಗ್​ ಅಳವಡಿಸಲಾಗಿದೆ. ಗೋಡೆಗಳಿಗೆ ಹೊಡೆದಿರುವ ಹಲಗೆಗಳನ್ನು ತೆರವುಗೊಳಿಸುವಾಗ ಗೋಡೆಗಳು ಸಣ್ಣಪುಟ್ಟ ಹಾನಿಯಾಗಿರುತ್ತವೆ. ಅದನ್ನು ರಿಪೇರಿ ಮಾಡಿ ಬಣ್ಣ ಹಾಕಿ ಕೊಡಬೇಕು. ಅಳವಡಿಸಲಾಗಿರುವ ಸಿಸಿ ಟಿವಿಗಳನ್ನು ಕಾಲೇಜಿನ ಭದ್ರತಾದೃಷ್ಟಿಯಿಂದ ಬಿಡಬೇಕು ಎಂದು ಉಪನ್ಯಾಸಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net