

ಬೆಂಗಳೂರು: ಮೂಡ ನಿವೇಶನ ವಿಚಾರ ಕೋರ್ಟ್ ಅಂಗಳದಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಸಚಿವ ಎಚ್‌ಡಿ.ಕುಮಾರಸ್ವಾಮಿ ಮತ್ತೊಂದು ಭೂ ಕಬಳಿಕೆ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಮೂಡದಿಂದ ಹಂಚಿಕೆ ಆಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಮನೆ ಕಟ್ಟಿಸಿದ್ದಾರೆ. ಬಳಿಕ ಆ ಮನೆಯನ್ನು ಮಾರುವ ನಾಟಕ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.
ಈ ರಾಜ್ಯಕ್ಕೆ ಉಪ ಮುಖ್ಯಮಂತ್ರಿ ಆಗಿದ್ದಾಗ ನೀವು ಯಾರ ಜಾಗವನ್ನು ಲಪಟಾಯಿಸಿ ಮನೆ ಕಟ್ಟಿದಿರಿ ಸ್ವಾಮಿ? ಅದರ ದಾಖಲೆ ಬೇಕಾ ನಿಮಗೆ? ದಲಿತರಿಗೆ ಮೂಡದಿಂದ ಹಂಚಿಕೆ ಆಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂಬುದನ್ನು ಸ್ವಲ್ಪ ಹೇಳುತ್ತೀರಾ? 15 ನಿವೇಶನ ಬರೆಸಿಕೊಂಡಿರುವುದು ಅಷ್ಟೇ ಅಲ್ಲ, ಅದಕ್ಕೆ ಮೀರಿದ ಹಗರಣಗಳನ್ನು ಇವರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರು.
ದಲಿತ ವಿಶೇಷಚೇತನರೊಬ್ಬರಿಗೆ ಬಳಿ 24,000 ರೂ. ಕಟ್ಟಿಸಿಕೊಂಡು ಮೂಡದಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು. ಆ ಜಾಗದ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ಸಾಕಮ್ಮ ಎಂಬುವವರ ಹೆಸರಿನಲ್ಲಿ 10 ಸಾವಿರ ಚದರ ಅಡಿ ಜಾಗದಲ್ಲಿ ಅಕ್ರಮವಾಗಿ ಮನೆಯನ್ನು ಸಿದ್ದರಾಮಯ್ಯ ಕಟ್ಟಿಕೊಂಡರು. ಆಮೇಲೆ ನಿವೇಶನದ ನಿಜ ಮಾಲೀಕರು ಬಂದು ನೋಡಿದರೆ ಅಲ್ಲಿ ಮನೆ ಕಟ್ಟಲಾಗಿತ್ತು. ಈ ಬಗ್ಗೆ ಜನ ಮರೆತಿರಬಹುದು ಆದರೆ ನನ್ನ ಬಳಿ ಈಗಲೂ ದಾಖಲೆ ಇದೆ ಎಂದು ಕುಮಾರಸ್ವಾಮಿ ಕುಟುಕಿದರು.