

ನಿಯಮ ಕಡ್ಡಾಯವಾಗಿದ್ದರೂ ಪಾಲನೆ ಆಗ್ತಿಲ್ಲ | ಆದೇಶ ಪಾಲಿಸದಿದ್ದರೆ ಎಫ್ಸಿ ನವೀಕರಣವಿಲ್ಲ
| ಕೀರ್ತಿನಾರಾಯಣ ಸಿ. ಬೆಂಗಳೂರು
ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ಗಳು ತಡೆರಹಿತವಾಗಿ ಸಂಚರಿಸುವುದಕ್ಕೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ತಂತ್ರಜ್ಞಾನ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದ ಸರ್ಕಾರದ ಆದೇಶ ಇನ್ನೂ ಸರಿಯಾಗಿ ಪಾಲನೆ ಆಗಿಲ್ಲ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಮುಂದಿನ 1 ತಿಂಗಳಲ್ಲಿ ಎಲ್ಲ ಆಂಬುಲೆನ್ಸ್ ಗಳಿಗೂ ಜಿಪಿಎಸ್ ಅಳವಡಿಸಿಕೊಳ್ಳು ವುದಕ್ಕೆ ಕಾಲಾವಕಾಶ ನೀಡಿದೆ. ಗಡುವು ಮೀರಿದಲ್ಲಿ ವಾಹ ನದ ಫಿಟ್ನೆಸ್ ಸರ್ಟಿಫಿಕೇಟ್ (ಎಫ್ಸಿ) ನವೀಕರಿಸದಿರಲು ತೀರ್ವನಿಸಿದೆ.
ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರದ 12,107 ಆಂಬುಲೆನ್ಸ್ಗಳಿವೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 2024ರ ಏಪ್ರಿಲ್ ಅಂತ್ಯಕ್ಕೆ ಎಲ್ಲ ಆರ್ಟಿಒ ಕಚೇರಿಗಳ ಅಂಕಿ-ಅಂಶದಂತೆ 8584 ಆಂಬುಲೆನ್ಸ್ ಗಳಲ್ಲಿ 2532 ಆಂಬುಲೆನ್ಸ್ಗಳಿಗಷ್ಟೇ ಜಿಪಿಎಸ್ ಅಳವಡಿಸಲಾಗಿದೆ. ಇನ್ನೂ 6046 ವಾಹನಗಳಿಗೆ ಅಳವಡಿಕೆ ಬಾಕಿ ಇದೆ. ಇದರಲ್ಲಿ ಜ್ಞಾನಭಾರತಿ, ಯಲಹಂಕ ಮತ್ತು ಚಂದಾಪುರ ಆರ್ಟಿಒ ಕಚೇರಿಗಳ ವ್ಯಾಪ್ತಿಯಲ್ಲಿರುವ ಆಂಬುಲೆನ್ಸ್ಗಳ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರಕ್ಕೆ ಸೇರಿದ ಆಂಬ್ಯುಲೆನ್ಸ್ಗಳಿಗೆ ಕೂಡಲೇ ಜಿಪಿಎಸ್ ಅಳವಡಿಸುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ಮುಂದಿನ 1ತಿಂಗಳ ಒಳಗೆ ಅಳವಡಿಸಿಕೊಳ್ಳಬೇಕು.
ಮುಂದಿನ ಪರಿಶೀಲನಾ ಸಭೆಯಲ್ಲಿ ಜಿಪಿಎಸ್ ವ್ಯವಸ್ಥೆ ಹಾಕಿರುವ ವಾಹನಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಆರ್ಟಿಒಗಳಿಗೆ ನಿರ್ದೇಶಿಸಲಾಗಿದೆ. ಹಾಸನದಲ್ಲಿ 174 ಸರ್ಕಾರಿ ಆಂಬುಲೆನ್ಸ್ಗಳಿದ್ದು, ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದೆ ಎಂದು ಸಾರಿಗೆ ಆಯುಕ್ತರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರಾಫಿಕ್ನಲ್ಲಿ ಸಿಕ್ಕರೆ ಇಲ್ಲಿಗೆ ಕರೆ ಮಾಡಿ...: ಬೆಂಗಳೂರು ನಗರದಲ್ಲಿ ರೋಗಿಯನ್ನು ತುರ್ತು ಸೇವೆಗಾಗಿ ರವಾನಿಸುವಾಗ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೆ, ರೋಗಿಗಳ ಕುಟುಂಬಸ್ಥರು, ಆಂಬುಲೆನ್ಸ್ ಸಿಬ್ಬಂದಿ ಸಹಾಯವಾಣಿ ಸಂಖ್ಯೆ-112 ಅಥವಾ ದೂರವಾಣಿ ಸಂಖ್ಯೆಗಳು 080-22943131, 080-22943030, 080-22943663, 080-22943684ಗೆ ಕರೆ ಮಾಡಿ ಸಂಚಾರ ದಟ್ಟಣೆ ನಿವಾರಿಸಲು ಕೋರಬಹುದು.
ವಾಹನ್ನಿಂದ ವಿವರ ಸಂಗ್ರಹ: ಇತ್ತೀಚೆಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸದ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ ನೋಂದಣಿ ಆಗಿರುವ ಖಾಸಗಿ ಮಾಲೀಕತ್ವದ ಆಂಬುಲೆನ್ಸ್ಗಳ ವಿವರಗಳನ್ನು ವಾಹನ್ ಡೆಟಾಬೇಸ್ನಿಂದ ಪಡೆದು ಹಾಗೂ ಖಾಸಗಿ ಮಾಲೀಕತ್ವದ ಆಂಬುಲೆನ್ಸ್ಗಳ ವಿವರ ಪಡೆದು ಇಎಂಆರ್ಐ ಎಂಪಾನಲ್ವೆುಂಟ್ ಸಹಯೋಗದಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಅವರು ಎಲ್ಲ ಆರ್ಟಿಒಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರ ಹೇಳಿದ್ದೇನು?: ಆಂಬುಲೆನ್ಸ್ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಂಚಾರ ಪೊಲೀಸರ ವತಿಯಿಂದ ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ ಮತ್ತು ಸ್ಥಿರ ದೂರವಾಣಿ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್ಗಳು ಸಂಚಾರ ಆರಂಭಿಸಿದಾಗ ಮತ್ತು ರೋಗಿಗಳನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯುವಾಗ ಬೆಂಗಳೂರು ನಗರದಲ್ಲಿ ಟ್ರಾಫಿಕ್ನಲ್ಲಿ ಸಿಲುಕಿದರೆ, ವಾಹನ ದಟ್ಟಣೆ ನಿವಾರಿಸಲು ಇಆರ್ಎಸ್ಎಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. ಈ ಸಹಾಯವಾಣಿ ಸಂಖ್ಯೆಯನ್ನು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪರ ಮತ್ತು ಕೋಲಾರ ಜಿಲ್ಲೆಗಳ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳ ಆಂಬುಲೆನ್ಸ್ಗಳಿಗೆ ನೀಡಲಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿತ್ತು.
. ಎಫ್ಸಿ ನವೀಕರಣ ವೇಳೆ ಪರೀಕ್ಷೆ ಕಡ್ಡಾಯ
. ಜಿಪಿಎಸ್ ವ್ಯವಸ್ಥೆಯನ್ನು ಪರಿಶೀಲಿಸಬೇಕು
. ದೃಢಪಟ್ಟ ಬಳಿಕವೇ ಮುಂದಿನ ಕ್ರಮ ಆಗಲಿ
. ಜಿಪಿಎಸ್ ಅಳವಡಿಸದಿದ್ದರೆ ಎಫ್ಸಿ ಬೇಡ
. ಎಲ್ಲ ಆರ್ಟಿಒ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ
. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಜತೆ ಆರ್ಟಿಒಗಳು ಸಭೆ ನಡೆಸಬೇಕು
. ಆಂಬುಲೆನ್ಸ್ಗೆ ಜಿಪಿಎಸ್ ಅಳವಡಿಸುವ ಆದೇಶ ಪಾಲನೆಗೆ ಸೂಚಿಸಿ
. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಚರ್ಚೆ ಆಗಲಿ
. ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲು ಅಪರ ಸಾರಿಗೆ ಆಯುಕ್ತರಿಗೆ ಸೂಚನೆ
. ಮುಂದಿನ ಒಂದು ತಿಂಗಳಲ್ಲಿ ಶೇ.100 ಜಿಪಿಎಸ್ ಅಳವಡಿಸಬೇಕು